ಭಾಷೆಗೆ ಸಂಕಟ ಬಂದರೆ ಸಹಿಸಲಾರೆ: ಪಾಪು
ಶಿವಮೊಗ್ಗ: ಕನ್ನಡದ ವಿಚಾರ ಬಂದಾಗ ನನ್ನಲ್ಲಿ ಇನ್ನೂ ರೋಷ, ಆಕ್ರೋಶ ಕಡಿಮೆಯಾಗಿಲ್ಲ. ಭಾಷೆಗೆ ಸಂಕಟ ಬಂದರೆ ನಾನು ಸಹಿಸುವುದಿಲ್ಲ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದರು.
ನಗರದ ಕರ್ನಾಟಕ ಸಂಘದಲ್ಲಿ ಅವರು ಸನ್ಮಾನ ಸ್ವೀಕರಿಸಿ, ರಾಜಕಾರಣಿಗಳು, ಮಂತ್ರಿಗಳು, ವಿದ್ವಾಂಸರು ಮಾತ್ರವಲ್ಲದೇ ಕನ್ನಡಿಗರ ಬಗ್ಗೆಯೂ ನನಗೆ ಬೇಸರವಿದೆ. ಕನ್ನಡದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಆದರೆ ಮಕ್ಕಳನ್ನು ಮಾತ್ರ ಇಂಗ್ಲೀಷ್ ಮಾದ್ಯಮಕ್ಕೆ ಸೇರಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
3ನೇ ಶತಮಾನದಲ್ಲಿ ದಾಖಲೆ: ಕನ್ನಡದ ಪದಗಳನ್ನು ಬಳಸಿರುವುದಕ್ಕೆ ಮೂರನೇ ಶತಮಾನದಲ್ಲಿಯೇ ದಾಖಲೆಗಳು ದೊರಕುತ್ತವೆ. ಈ ಭಾಷೆಯ ವ್ಯಾಪಕತೆ ದೊಡ್ಡದು. ನಾನು ದೆಹಲಿಯಿಂದ ನೇಪಾಳಕ್ಕೆ ಹೋಗುವಾಗ ಕುಮಾರಹಟ್ಟಿ ಎಂಬ ಊರನ್ನು ನೋಡಿದೆ. ಇದು ಅಪ್ಪಟ ಕನ್ನಡದ ಹೆಸರು. ಅಲೆಕ್ಸಾಂಡರ್ ಕಾಲದಲ್ಲಿಯೂ -ಊರು- ಎಂಬ ಕನ್ನಡ ಪದ ಬಳಕೆಯಾಗಿದೆ. ಮಹಾರಾಷ್ಟ್ರದಲ್ಲಿ ಕನ್ನಡದ ನೂರಾರು ಶಾಸನಗಳು ಸಿಕ್ಕಿವೆ ಎಂದು ಅವರು ಹೇಳಿದರು.
ವಿದೇಶ ಪ್ರವಾಸ ಏಕೆ?: ಅಧ್ಯಯನಕ್ಕೆಂದು ನಮ್ಮ ಮಂತ್ರಿಗಳು ವಿದೇಶ ಪ್ರವಾಸ ಏಕೆ ಮಾಡಬೇಕು ಎಂದು ಪ್ರಶ್ನಿಸಿದ ಪಾಟೀಲ ಪುಟ್ಟಪ್ಪ ಅವರು, ಮೊದಲು ನಮ್ಮ ಮಂತ್ರಿಗಳು ರಾಜ್ಯದ ಎಲ್ಲಾ ತಾಲೂಕುಗಳು, ಜಿಲ್ಲೆಯನ್ನು ನೋಡಲಿ. ಅಲ್ಲಿಯೇ ಇವರಿಗೆ ಸಾಕಷ್ಟು ವಿಷಯಗಳು ಸಿಗುತ್ತವೆ ಎಂದು ಪಾಟೀಲ ಪುಟ್ಟಪ್ಪ ಹೇಳಿದರು.
ಮುಖ್ಯಮಂತ್ರಿ ಚಂದ್ರು ಅವರು ತಮ್ಮ ಹೆಸರಿನೊಂದಿಗೆ ಮುಖ್ಯಮಂತ್ರಿ ಸೇರಿಸಿಕೊಂಡಿರುವುದನ್ನೂ ವಿಡಂಬನೆ ಮಾಡಿದ ಅವರು, ಇವರಿಗೆ ಅಪ್ಪ ಇಟ್ಟ ಹೆಸರಿಲ್ಲವೇನು ಒಂದು ನಾಟಕ ಮಾಡಿ ಮುಖ್ಯಮಂತ್ರಿ ಅಂತ ಜೋಡಿಸಿಕೊಂಡ್ರು. ಒಂದೇ ವೇದಿಕೆ ಮೇಲೆ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಹಾಗೂ ಇವರು ಇದ್ದರೆ ಎಂಥ ಗೊಂದಲ ಉಂಟಾಗುತ್ತದೆ. ಇಂಥವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ ಅವರು ಭಾವಗೀತೆ ಸ್ಪರ್ಧೆ ವಿಜೇತರಿಗೆ ದಿ. ರಂಗನಾಯಕಮ್ಮ ಗಣೇಶರಾವ್ ದತ್ತಿನಿಧಿ ಬಹುಮಾನ ವಿತರಿಸಿದರು. ಕರ್ನಾಟಕ ಸಂಘದ ಉಪಾಧ್ಯಕ್ಷ ಎಚ್.ಡಿ. ಉದಯಶಂಕರ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಡಾ. ಎಚ್.ಎಸ್. ನಾಗಭೂಷಣ್ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರು.