ಮಾರಿಗದ್ದುಗೆ ಪ್ರಸಾದ ಮಂದಿರ ಲೋಕಾರ್ಪಣೆ
ಶಿವಮೊಗ್ಗ: ದೇವರಲ್ಲಿ ಯಾವಾಗಲೂ ಪ್ರೀತಿಯಿಂದ ಮಾತ್ರ ತಲೆಬಾಗಬೇಕು. ಅದರ ಹೊರತಾಗಿ ಅಳುಕಿನಿಂದ, ಅಧರ್ಮ ಮಾರ್ಗದಲ್ಲಿ ನಡೆಯುತ್ತಿರುವುದನ್ನು ಮನ್ನಿಸುವಂತೆ ಬೇಡಬಾರದು. ಕಣ್ಣಿಗೆ ಕಾಣದ ದೇವರಿಗೆ ಏಮಾರಿಸಲು ಸಾಧ್ಯವಿಲ್ಲ. ಧರ್ಮದ ದಾರಿಯಲ್ಲಿ ನಡೆದರೆ ದೇವರೇ ನಮ್ಮನ್ನು ಸದಾ ರಕ್ಷಿಸುತ್ತಾನೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಶ್ರೀ ಡಿ. ವಿರೇಂದ್ರ ಹೆಗ್ಗಡೆ ಹೇಳಿದರು.
ಶುಕ್ರವಾರ ನಗರದ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ವತಿಯಿಂದ ಶ್ರೀ ಮಾರಿಕಾಂಬ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ನೂತನ ಪ್ರಸಾದ ಮಂದಿರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಅಧರ್ಮದಲ್ಲಿ ನಡೆಯುವವರಿಗೆ ದೇವರ ಭಯ ಇರಬೇಕು. ಅನ್ಯಾಯ ಮಾಡುವವರು, ಇನ್ನೊಬ್ಬರನ್ನು ಹಿಂಸೆ ಮಾಡುವವರಿಗೆ ಮನಸ್ಸಿನಲ್ಲಿ ಸಣ್ಣ ಅಳಕು ಇದ್ದೇ ಇರುತ್ತದೆ ಎಂದ ಅವರು, ಇಹಲೋಕದಲ್ಲಿ ಕೈಗೊಂಡ ಸತ್ಕಾರ್ಯ ನಮ್ಮ ಖಾತೆಗೆ ಜಮಾ ಆಗುತ್ತಿರುತ್ತವೆ. ಹಾಗಾಗಿ ಪ್ರತಿಯೊಬ್ಬ ಮನುಷ್ಯ ತನ್ನ ದುಡಿಮೆಯಲ್ಲಿ ದಾನ, ಧರ್ಮ ಸತ್ಕಾರ್ಯಗಳಿಗೆ ವಿನಿಯೋಗ ಮಾಡಬೇಕು ಎಂದು ಸಲಹೆ ನೀಡಿದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಮಾರಿಕಾಂಬಾ ದೇವಾಲಯಕ್ಕೆ ಸರ್ಕಾರ ಅಥವಾ ನಗರಪಾಲಿಕೆಯಿಂದ ಅಗತ್ಯ ನೆರವು ಕೊಡಿಸಲಾಗುವುದು. ದೇವಸ್ಥಾನದ ಇನ್ನಿತರ ಚಟುವಟಿಕೆಗಳಿಗಾಗಿ ಮುಂದೆ ಲಭ್ಯವಾಗಲಿರುವ ಅನುದಾನದಲ್ಲಿ 10 ಲಕ್ಷ ರುಪಾಯಿ ಅನುದಾನ ನೀಡುವುದಾಗಿ ಪ್ರಕಟಿಸಿದರು.
ಮಾರಿಕಾಂಬಾ ದೇವಸ್ಥಾನ ಸಮಿತಿಯ ರಾಮಪ್ಪ, ಎನ್.ಮಂಜುನಾಥ್, ಕರಿಯಣ್ಣ, ನಗರಪಾಲಿಕೆ ಮೇಯರ್ ಖುರ್ಷಿದಾಬಾನು, ಉಪಮೇಯರ್ ರೇಖಾ ಚಂದ್ರಶೇಖರ್, ಪಾಲಿಕೆ ಸದಸ್ಯರಾದ ನಾಗರಾಜ ಕಂಕಾರಿ, ಗೌರಿ ಶ್ರೀನಾಥ್, ಸುರೇಖಾ ಮುರಳೀಧರ್, ಮರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.