ಕಾನೂನು ಅರಿತರೆ ಆಡಳಿತ ಸುಗಮ
ಸೊರಬ: ಲೋಕಾಯುಕ್ತದ ಕಾನೂನು ಅರಿತು, ಸಮರ್ಪಕ ಬಳಕೆ ಮಾಡಿಕೊಂಡರೆ ಅಭಿವೃದ್ಧಿ ಮತ್ತು ಆಡಳಿತ ಸುಗುಮವಾಗಿರಲು ಸಾಧ್ಯ ಎಂದು ಜಿಲ್ಲಾ ಲೋಕಾಯುಕ್ತ ಅಧಿಕಾರಿ ಪುರುಷೋತ್ತಮ್ ತಿಳಿಸಿದರು. ತಾಲೂಕಿನ ಚಂದ್ರಗುತ್ತಿಯಲ್ಲಿ ನಡೆದ ಲೋಕಾಯುಕ್ತ ದೂರು ಸ್ವೀಕೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಸಾಮಾನ್ಯ ಜನತೆಗೆ ಮೂಲ ಅವಶ್ಯಕತೆಗಳ ಸೌಲಭ್ಯವನ್ನು ಪ್ರಾಮಾಣಿಕವಾಗಿ ತಲುಪಿಸುವಲ್ಲಿ, ದೇಶದ ಸ್ವಾಸ್ತ ಕಾಪಾಡುವಲ್ಲಿ ಇಲಾಖೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಇಂದು ಮಾಹಿತಿ ಹಕ್ಕು, ಪಡೆದು ಪ್ರಶ್ನಿಸುವ ಹಕ್ಕು ನಿಮಗೆಲ್ಲರಿಗೂ ಇದೆ. ಯಾವುದೇ ದೂರು ಸಲ್ಲಿಸುವ ಮುನ್ನ ನೀವು ಕೊಡುವ ದಾಖಲೆಗಳು ಸಮರ್ಪಕ ಹಾಗೂ ನಿಯಮಾನುಸಾರ ನೀಡಬೇಕು ಎಂದರು.
ವಿಮೂಕರ್ಜಿ, ದೂರವಾಣಿ ಹೇಳಿಕೆಗಳನ್ನು ಪರಿಗಣಿಸುವುದಿಲ್ಲ ಎಂದ ಅವರು ಲೋಕಾಯುಕ್ತಕ್ಕೆ ಸಲ್ಲಿಸಬೇಕಾದ ದೂರು ಅರ್ಜಿ ಇತ್ಯಾದಿ ಕುರಿತು ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು, ಚಂದ್ರಗುತ್ತಿ, ನ್ಯಾರ್ಶಿ, ಹರೀಶಿ ಗ್ರಾಪಂ ಅಧ್ಯಕ್ಷ ಪದಾಧಿಕಾರಿಗಳು, ಗ್ರಾಮಸ್ಥರು, ಲೋಕಾಯುಕ್ತ ಸಿಬ್ಬಂದಿ ಇದ್ದರು.