ಖರೀದಿಗೆ ಮಿತಿ: ಪ್ರತಿಭಟನೆ
ಶಿಕಾರಿಪುರ: ಮೆಕ್ಕೆಜೋಳ ಹಾಗೂ ಬತ್ತ ಖರೀದಿ ಕೇಂದ್ರದ ಮೂಲಕ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಏಕಾಏಕಿ ಖರೀದಿ ಮಿತಿಯನ್ನು 75 ಕ್ವಿಂಟಲ್ಗೆ ಮಿತಿಗೊಳಿಸಿ ಸರ್ಕಾರ ಶನಿವಾರ ಹೊರಡಿಸಿದ ಆದೇಶಕ್ಕೆ ಶಿಕಾರಿಪುರದ ಎಪಿಎಂಸಿ ಖರೀದಿ ಕೇಂದ್ರದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಶನಿವಾರ ಸರ್ಕಾರ ನೂತನ ಆದೇಶ ಹೊರಡಿಸಿ ಮೆಕ್ಕೆಜೋಳದ ಖರೀದಿಯನ್ನು ಪಹಣಿದಾರ ರೈತನೊಬ್ಬನಿಗೆ ಕೇವಲ 75 ಕ್ವಿಂಟಲ್ ಮಿತಿಗೊಳಿಸಿದ್ದು, ನೂತನ ಆದೇಶದಿಂದ ಕೆರಳಿದ ರೈತರು ಈಗಾಗಲೇ ಕೇಂದ್ರದಲ್ಲಿನ ಸಹಸ್ರಾರು ಕ್ವಿಂಟಲ್ ಬೆಳೆಯ ಜತೆಗೆ ಜೋಳದ ಕಣಜವಾಗಿರುವ ತಾಲೂಕಿನ ಎಲ್ಲಾ ರೈತರ ಬೆಳೆ ಖರೀದಿಸುವಂತೆ ಆಗ್ರಹಿಸಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿ ಪ್ರತಿಭಟಿಸಿದರು.ರೈತ ಗೊಗ್ಗ ಗ್ರಾಮದ ರಾಜಣ್ಣ ಮಾತನಾಡಿ, ಗೋದಾಮು ಮತ್ತಿತರ ಸಮಸ್ಯೆಯ ನೆಪವೊಡ್ಡಿ ಜ. 1ರಂದು ಕೇಂದ್ರಕ್ಕೆ ತಂದ ಜೋಳದ ಖರೀದಿ ಇದುವರೆಗೂ ನಡೆದಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರದ ಏಕಾಏಕಿ ಹೊಸ ಆದೇಶದಿಂದ ಕೇಂದ್ರದಲ್ಲಿನ ಜೋಳವನ್ನು ವಾಪಸ್ ಕೊಂಡೊಯ್ಯುವುದು ಅಸಾಧ್ಯ. ಹೊಸ ಆದೇಶ ಹಿಂಪಡೆದು ತಾಲೂಕಿನ ರೈತರ ಸಂಪೂರ್ಣ ಜೋಳ ಖರೀದಿಸುವಂತೆ ಒತ್ತಾಯಿಸಿದರು.