ಜಿಎಸ್ಎಸ್ಗೆ ಶ್ರದ್ಧಾಂಜಲಿ
ಶಿವಮೊಗ್ಗ: ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ನುಡಿ ನಮನ, ಗೀತ ಗಾಯನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಶಿವರುದ್ರಪ್ಪ ಅವರ ಒಡನಾಟ ಸ್ಮರಣೆಯೂ ನಡೆಯಿತು.
ಗುರುಗುಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಎಸ್ಎಸ್ ಅವರ ಗೀತೆಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ವಿಮರ್ಶಕ ಎಚ್.ಎನ್. ರಾಘವೇಂದ್ರ ರಾವ್, ಜಿ.ಎಸ್. ಶಿವರುದ್ರಪ್ಪನವರ ಕವನಗಳು ಕಾಲಕ್ಕೆ ಹಿಡಿದ ಕನ್ನಡಿಯ ಹಾಗಿತ್ತು. ಜತೆಗೆ ನಮ್ಮ ನಮ್ಮ ಹೃದಯಗಳಿಗೆ ಹಿಡಿದ ಕನ್ನಡಿಯೂ ಆಗಿತ್ತು. ಅದರಿಂದಾಗಿಯೇ ಅವು ಹೆಚ್ಚಿನ ಜನರನ್ನು ತಲುಪಿದ್ದವು ಎಂದು ಅಭಿಪ್ರಾಯಪಟ್ಟರು.ಯಾವುದೇ ಕವಿ ಕಟ್ಟಿದ ಕವಿತೆ ಯಾರನ್ನೂ ಮುಟ್ಟದೆ, ತಟ್ಟದೆ ಹೋದರೆ ಅದರ ಪಾಡಿಗೆ ಅದು, ನಮ್ಮ ಪಾಡಿಗೆ ನಾವು ಎಂಬಂತಾಗಿಬಿಡುತ್ತದೆ. ಎಂದರು. ಗಾಯಕ ಶಿವಮೊಗ್ಗ ಸುಬ್ಬಣ್ಣ ಯಾವ ಹಾಡ ಹಾಡಲಿ ಎನ್ನುವ ಶಿವರುದ್ರಪ್ಪ ಅವರ ಗೀತೆಯನ್ನು ಹಾಡಿದರು. ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ತೀ.ನಂ. ಶಂಕರನಾರಾಯಣ, ಉದಯಶಂಕರಶಾಸ್ತ್ರಿ ಮತ್ತಿತರರು ಇದ್ದರು.