ಮೆಕ್ಕೆಜೋಳ ಖರೀದಿಗೆ ಮಿತಿ: ಸರ್ಕಾರದ ಆದೇಶಕ್ಕೆ ರೈತರ ವಿರೋಧ
ಶಿವಮೊಗ್ಗ: ಒಬ್ಬ ರೈತನಿಂದ ಕೇವಲ 75 ಚೀಲ ಮೆಕ್ಕೆಜೋಳ ಖರೀದಿಸಬೇಕೆಂಬ ಸರ್ಕಾರದ ಆದೇಶದ ವಿರುದ್ಧ ರೈತ ಸಮೂಹ ಆತಂಕ ವ್ಯಕ್ತಪಡಿಸಿದ್ದು, ಅಸಮಾಧಾನ ಹೊರಹಾಕಿದೆ.
ಜನವರಿ 17ರಂದು ಸರ್ಕಾರ ಆದೇಶ ಹೊರಡಿಸಿ ಪ್ರತಿ ರೈತನಿಂದ ಕೇವಲ 75 ಚೀಲ ಮೆಕ್ಕೆಜೋಳ ಖರೀದಿಸಬೇಕೆಂದು ಆದೇಶ ಹೊರಡಿಸಿದೆ. ಅದರಂತೆ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಪ್ರತಿ ರೈತನಿಂದ ಕೇವಲ 75 ಚೀಲ ಮಾತ್ರ ಜೋಳ ಮಾತ್ರ ಖರೀದಿ ಮಾಡಲಾಗುತ್ತಿತ್ತು. ಸರ್ಕಾರದ ದಿಢೀರ್ ಕ್ರಮದಿಂದ ಖರೀದಿ ಕೇಂದ್ರದ ಆವರಣದಲ್ಲಿ ಮೆಕ್ಕೆಜೋಳ ತಂದಿದ್ದ ಹಲವು ಲಾರಿಗಳು ಸಾಲುಗಟ್ಟಿ ನಿಂತಿದ್ದವು. ರೈತರು ದಿಕ್ಕು ಕಾಣದೇ ಕಂಗಾಲಾಗಿದ್ದರು. ಕೆಲವು ರೈತರು ಸರ್ಕಾರದ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಖರೀದಿ ಕೇಂದ್ರದ ಮುಂದೆ ಪ್ರತಿಭಟನೆಗೆ ಮುಂದಾದರು. ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ ಸಹ ಅಲ್ಲಿಗೆ ದೌಡಾಯಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕರ್ನಾಟಕ ಆಹಾರ ಉಗ್ರಾಣ ನಿಗಮದ ಅಧಿಕಾರಿ ವೆಂಕಟೇಶ್ ಅವರಿಗೆ ರೈತರು ದಿಗ್ಭಂಧನ ಹಾಕಿದ ಪ್ರಸಂಗವೂ ನಡೆಯಿತು. ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿಗೆ ಹಾಕಿರುವ ಮಿತಿಯನ್ನು ತಕ್ಷಣ ರದ್ದುಗೊಳಿಸಬೇಕು, ಇಲ್ಲವಾದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಶಾಸಕರು ಎಚ್ಚರಿಸಿದರು.