ಹಿಂಜರಿಕೆ ಮನೋಭಾವ ದೂರ ಮಾಡಿ'
ಸಾಗರ: ಮಕ್ಕಳಲ್ಲಿನ ಹಿಂಜರಿಕೆ ಮನೋಭಾವ ದೂರ ಮಾಡಿ, ಅವರಲ್ಲಿ ಬದುಕಿನ ಬಗ್ಗೆ ಅತ್ಮವಿಶ್ವಾಸವನ್ನು ಮೂಡಿಸುವ ಕೆಲಸ ಮಾಡಬೇಕು ಎಂದು ಉಪವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಬಿ.ಜಿ. ಸಂಗಮ್ ಹೇಳಿದರು. ಇಲ್ಲಿನ ಗಾಂಧಿಮೈದಾನದಲ್ಲಿ ಸೇವಾಸಾಗರ ವಿದ್ಯಾಸಂಸ್ಥೆ ಏರ್ಪಡಿಸಿದ್ದ ಸವಿಜೇನ ಸಂಜೆ ವಷೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಿ, ಮಕ್ಕಳಿಗೆ ಶಿಕ್ಷಣ ಹೊರೆಯೆಂದು ಅನ್ನಿಸಬಾರದು ಎಂದು ಹೇಳಿದರು. ನಾಲ್ಕು ಗೋಡೆಯ ನಡುವಿನ ಶಿಕ್ಷಣದ ಜೊತೆಗೆ ಮಕ್ಕಳು ಸಮಾಜದ ನಡುವಿನಲ್ಲಿಯೂ ಕಲಿಯಲು ಸಾಕಷ್ಟು ವಿಷಯಗಳಿರುತ್ತವೆ. ಇದರ ಬಗ್ಗೆ ಮಕ್ಕಳಿಗೆ ತಿಳಿ ಹೇಳುವಂತೆ ಆಗಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸೇವಾಸಾಗರ ಟ್ರಸ್ಟ್ ಅಧ್ಯಕ್ಷ ಅ.ಪು.ನಾರಾಯಣಪ್ಪ, ಸಂಸ್ಥೆಯು ಸೇವೆಯ ಉದ್ದೇಶ ಇರಿಸಿಕೊಂಡು, ಮಕ್ಕಳಲ್ಲಿ ರಾಷ್ಟ್ರಭಕ್ತಿ, ಸಾಂಸ್ಕಣತಿಕ, ಪರಿಸರ ಪ್ರಜ್ಞೆ ಮೂಡಿಸುವ ಮೂಲಕ ಉತ್ತಮ ಪ್ರಜೆಯಾಗಿ ರೂಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕವಲಕೋಡು ವೆಂಕಟೇಶ್, ವಿದ್ಯಾಸಂಸ್ಥೆ ಮುಖ್ಯಶಿಕ್ಷಕ ಎನ್. ನಾರಾಯಣಮೂರ್ತಿ ಹಾಜರಿದ್ದರು.