ಒಡೆಯರ್ ಕನಸು ಸಾಕಾರ: ಭರವಸೆ
ಕ.ಪ್ರ. ವಾರ್ತೆ ಶಿವಮೊಗ್ಗ ಜ.19
ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕ್ರಿಕೆಟ್ ತರಬೇತಿಗೆ ಬೇಕಾದ ಎಲ್ಲಾ ಮೂಲ ಸೌಲಭ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡುವುದಾಗಿ ಕೆಎಸ್ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ನಗರದ ರಾಯಲ್ ಆರ್ಕಿಡ್ ಸಭಾಂಗಣದಲ್ಲಿ ಭಾನುವಾರ ಕೆಎಸ್ಸಿಎ ಶಿವಮೊಗ್ಗ ವಲಯ ಲೀಗ್ ಪಂದ್ಯಾವಳಿ ಬಹುಮಾನ ವಿತರಣಾ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕ್ರಿಕೆಟ್ ಆಟಗಾರರು ಮುಖ್ಯವಾಗಿ ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು. ಶಾರೀರಿಕ ಆರೋಗ್ಯ ಸಾಧನೆಯಲ್ಲಿ ಪ್ರಧಾನಪಾತ್ರ ವಹಿಸುತ್ತದೆ ಎಂದರು.
ಕೆಎಸ್ಸಿಎ ಅಧ್ಯಕ್ಷರಾಗಿದ್ದ ದಿ. ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ಕೆಪಿಎಲ್ ಪಂದ್ಯಾವಳಿಯನ್ನು ಪುನರಾರಂಭಿಸಬೇಕೆಂಬ ಕನಸು ಹೊಂದಿದ್ದರು. ಅವರ ಕನಸನ್ನು ಸಾಕಾರಗೊಳಿಸಲಾಗುವುದು ಎಂದ ಬೃಜೇಶ್, ಕೆಎಸ್ಸಿಎ ಈಗಾಗಲೇ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಇವುಗಳ ಪ್ರಯೋಜವನ್ನು ಕ್ರೀಡಾಪಟುಗಳು ಪಡೆಯಬೇಕು ಎಂದು ತಿಳಿಸಿದರು.
14 ವರ್ಷ ವಯೋವುತಿಯೊಳಗಿನ ಪಂದ್ಯಾವಳಿ ನಿಜಕ್ಕೂ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗುತ್ತದೆ. ಹಾಗೆಯೇ ಈ ವಯಸ್ಸಿನಲ್ಲಿ ಕಲಿಯುವ ಅವಕಾಶವೂ ಸಾಕಷ್ಟು ಇರುತ್ತದೆ ಎಂದು ಹೇಳಿದರು.
ಕೆಎಸ್ಸಿಎ ಶಿವಮೊಗ್ಗ ವಲಯ ಸಂಯೋಜಕ ಶಶಿಧರ್ ಮಾತನಾಡಿ, ಆಟಗಾರರಿಗೆ ಬೆಂಗಳೂರಿನಲ್ಲಿ ಏನು ದೊರಕುತ್ತಿದೆಯೋ ಅದೇ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಕ್ಲಬ್ಗಳಿಗೂ ಕಲ್ಪಿಸಲಾಗುತ್ತಿದೆ. ಆಟಗಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಕ್ರಿಕೆಟ್ ಕ್ಲಬ್ಗಳು ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದಾಗಿ ಮಕ್ಕಳಿಗೆ ಪ್ರೋತ್ಸಾಹ ದೊರಕಿದಂತಾಗುತ್ತದೆಯಲ್ಲದೆ, ತಮ್ಮಲ್ಲಿನ ಪ್ರತಿಭೆ ಹೊರಹಾಕಲು ಸಹಕಾರಿಯಾಗುತ್ತದೆ ಎಂದರು.
ಮಾಜಿ ಕ್ರಿಕೆಟಿಗ ರಘುರಾಮ್ ಭಟ್, ಕೆಎಸ್ಸಿಎ ಶಿವಮೊಗ್ಗ ವಲಯ ಅಧ್ಯಕ್ಷ ಎಸ್.ಎಸ್. ಸುಕುಮಾರ್, ಡಿ.ಆರ್. ನಾಗರಾಜ್, ರಘುಪ್ರಸಾದ್, ಎಸ್.ಎಸ್. ಪುಟ್ಟಪ್ಪ, ಮುರಳಿ ಮತ್ತಿತರು ಇದ್ದರು.
ಬಹುಮಾನ ಪಡೆದವರು: ಗ್ರೂಪ್ 1-1ನೇ ಡಿವಿಜನ್ನಲ್ಲಿ ಚಿಕ್ಕಮಗಳೂರಿನ ರಾಣಾ ಸ್ಪೋರ್ಟ್ಸ್ ಕ್ಲಬ್ (ಪ್ರಥಮ), ಜೆಎನ್ಎನ್ಸಿಇ ಸ್ಪೋರ್ಟ್ಸ್ ಕ್ಲಬ್ (ದ್ವಿತೀಯ), ಹಾಸನ ಕ್ರಿಕೆಟರ್ಸ್ ಅಸೋಸಿಯೇಷನ್ ಹಾಗೂ ಮಲ್ನಾಡ್ ಕ್ರಿಕೆಟ್ ಕ್ಲಬ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಅಲಂಕರಿಸಿ ಬಹುಮಾನ ಪಡೆದುಕೊಂಡವು.
2ನೇ ಡಿವಿಜನ್ನಲ್ಲಿ ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ ಪ್ರಥಮ, ಫ್ರೆಂಡ್ಸ್ ಕ್ರಿಕೆಟರ್ಸ್ ದ್ವಿತೀಯ ಸ್ಥಾನಗಳಿಸಿದರೆ, ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್, ಹಾಸನದ ಹೇಮಾವತಿ ಕ್ರಿಕೆಟ್ ಕ್ಲಬ್ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದು ಬಹುಮಾನ ಗಳಿಸಿದವು.
ಮೂರನೇ ಡಿವಿಜನ್ನಲ್ಲಿ ಸಾಗರ ಕ್ರಿಕೆಟ್ ಅಕಾಡೆಮಿ, ಮರ್ಚಂಟ್ ಕ್ರಿಕೆಟ್ ಕ್ಲಬ್, ಚಿಕ್ಕಮಗಳೂರಿನ ರತ್ನಗಿರಿ ಸ್ಪೋರ್ಟ್ಸ್ ಕ್ಲಬ್ ಕ್ರಮವಾಗಿ ಮೊದಲ ಮೂರು ಸ್ಥಾನಗಳಿಸಿ, ಬಹುಮಾನ ಪಡೆದುಕೊಂಡವು.
ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಸುಮಂತ್, ಗೋಪಿನಾಥ್, ಅಮ್ಜದ್ ತಮ್ಮದಾಗಿಸಿಕೊಂಡರೆ, ರಘುವೀರ್, ಮನೋಹರ್, ರವಿಕುಮಾರ್ ಬೆಸ್ಟ್ ಬೌಲರ್ ಪ್ರಶಸ್ತಿಗೆ ಭಾಜನರಾದರು. ರಾಜೇಶ್, ದೇವರಾಜ್ ಪಾಟೀಲ್, ನವೀನ್ಕುಮಾರ್ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ಕೆಎಸ್ಸಿಎ ಇಂಟರ್ ಹೈಸ್ಕೂಲ್ ಟೂರ್ನಮೆಂಟ್ನಲ್ಲಿ ಡಿವಿಎಸ್ ಪ್ರೌಢಶಾಲೆ ಪ್ರಥಮ ಬಹುಮಾನ ಪಡೆದರೆ, ಭದ್ರಾವತಿಯ ಸೆಂಟ್ ಚಾರ್ಲ್ಸ್ ಪ್ರೌಢಶಾಲೆ ದ್ವಿತೀಯ ಬಹುಮಾನ ಸ್ವೀಕರಿಸಿತು.