ಪೊಲೀಸ್ ಕ್ರಿಮಿನಲ್‌ತನಕ್ಕೆ ಸಿಸಿ ಕ್ಯಾಮೆರಾ ಸಾಕ್ಷಿ
ಕ.ಪ್ರ.ವಾರ್ತೆ ಶಿವಮೊಗ್ಗ ಜ. 19
ಸ್ಫೋಟಕಗಳನ್ನು ಹೊಂದಿದ್ದ ಬ್ಯಾಗ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯೇ ಈಗ ಬಂಧಿಯಾಗಿದ್ದು, ಈ ಪ್ರಕರಣದ ಹಿನ್ನೆಲೆ ಬಯಲಾಗಿದೆ. ಜೊತೆಗೆ ಪೊಲೀಸಪ್ಪನ ಕ್ರಿಮಿನಲ್ ಬುದ್ಧಿ ಹಾಗೂ ಆತನ ಪಲ್ಟಿ ಹೊಡೆದ ಆಲೋಚನೆಗಳೂ ಈಗ ಬೆಳಕಿಗೆ ಬಂದಿದೆ.
ಜ.13ರಂದು ನಸುಕಿನಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಒಂದು ಕರೆ ಬರುತ್ತದೆ. ಅಣ್ಣಾ ನಗರದ ಶ್ರೀನಿವಾಸ್ ಅವರ ಮುಂದೆ ನಿಂತ ವಾಹನದಲ್ಲಿ ಸ್ಫೋಟಕವಿರುವ ಬ್ಯಾಗ್ ಇದೆ ಎಂದು ಅಪರಿಚಿತ ಧ್ವನಿ ಹೇಳುತ್ತದೆ. ಈ ಮಾಹಿತಿ ಆಧರಿಸಿದ ಪೊಲೀಸರು ದೊಡ್ಡಪೇಟೆ ಪೊಲೀಸರಿಗೆ ಸುದ್ದಿಮುಟ್ಟಿಸಿ ತಕ್ಷಣವೇ ಸ್ಥಳಕ್ಕೆ ಹೋಗುವಂತೆ ಕಳುಹಿಸುತ್ತಾರೆ.
ಅಲ್ಲಿಗೆ ತೆರಳಿದ ಪೊಲೀಸ್ ಸಿಬ್ಬಂದಿಗೆ ಬ್ಯಾಗ್ ಕಾಣುವುದಿಲ್ಲ. ಈ ಮಧ್ಯೆಯೇ ಪದೇ ಪದೆ ಕಂಟ್ರೋಲ್ ರೂಂಗೆ ಬರುವ ಕರೆ ಇನ್ನೂ ದಾಳಿ ಮಾಡಿಲ್ಲ ಏಕೆ ಎಂದು ಪ್ರಶ್ನಿಸುತ್ತದೆ. ಇಷ್ಟರಲ್ಲಿ ಶ್ರೀನಿವಾಸ್ ಅವರ ಮನೆಗೆ ತೆರಳಿ ಅವರನ್ನು ಎಬ್ಬಿಸಿದಾಗ ಮನೆ ಮುಂದೆ ಬ್ಯಾಗ್ ಇರುವುದು ಪೊಲೀಸರಿಗೆ ಕಂಡುಬರುತ್ತದೆ. ತಕ್ಷಣವೇ ಠಾಣಾಧಿಕಾರಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಅಲ್ಲಿಗಾಗಮಿಸಿ ಪರಿಶೀಲಿಸುತ್ತಾರೆ. ಬ್ಯಾಗ್ ತಮಗೆ ಸೇರಿದ್ದಲ್ಲ ಎಂದು ಶ್ರೀನಿವಾಸ್ ಸ್ಪಷ್ಟಪಡಿಸುತ್ತಾರೆ.
ಆದರೆ, ಬ್ಯಾಗ್‌ನಲ್ಲಿದ್ದ ಪತ್ರ ಪೊಲೀಸರ ಚಿಂತೆಗೆ ಕಾರಣವಾಗುತ್ತದೆ. ಜ.26ರಂದು ಸ್ಫೋಟ ನಡೆಸುವ ಬೆದರಿಕೆ ಇರುತ್ತದೆ. ಹಾಗೆಯೇ ಶ್ರೀನಿವಾಸ್ ಅವರ ಕುಟುಂಬದ ಇತರ ಹೆಸರು ಪ್ರಸ್ತಾಪವಿರುತ್ತದೆ.
ಪ್ರಕರಣದ ವಿವಿಧ ಮಜಲುಗಳನ್ನು ಪರಿಶೀಲಿಸಿದಾಗ ಖೋವಾ ವ್ಯಾಪಾರಿ ವೃತ್ತಿ ವೈಷಮ್ಯದ ಒಂದು ಎಳೆ ಸಿಗುತ್ತದೆ. ಹಾಗೆಯೇ ಪೊಲೀಸ್ ಕಂಟ್ರೋಲ್ ರೂಂಗೆ ದೂರು ಬಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಯಿನ್‌ಬೂತ್ ಮತ್ತು ಅಲ್ಲೇ ಇರುವ ಸಿಸಿಟಿವಿಯ ಸಹಾಯಕ್ಕೆ ಬರುತ್ತದೆ.
ಸಿಸಿಟಿವಿ ಫುಟೇಜ್ ಪರಿಶೀಲಿಸಿದಾಗ ಪೊಲೀಸರೇ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಅಲ್ಲಿದ್ದಿದ್ದು ಪೊಲೀಸ್ ಸಿಬ್ಬಂದಿ ಇಸ್ಮಾಯಿಲ್ ಎಂಬುದು ಗೊತ್ತಾಗುತ್ತದೆ.
ವೃತ್ತಿ ವೈಷಮ್ಯ: ಶ್ರೀನಿವಾಸ್ ಹಾಗೂ ಅವರ ಕುಟುಂಬ ಪ್ರಮುಖ ಕೋವಾ ವ್ಯಾಪಾರಿಗಳು. ಅದೇ ರೀತಿ ಸುರೇಶ್ ಕೂಡ ಕೋವಾ ವ್ಯಾಪಾರಿ. ಶ್ರೀನಿವಾಸ್ ಅವರ ವ್ಯಾಪಾರವನ್ನು ಸಹಿಸದ ಸುರೇಶ್ ಖೆಡ್ಡಾವೊಂದನ್ನು ಸಿದ್ಧಪಡಿಸುತ್ತಾರೆ. ಅದರ ಪ್ರಧಾನ ರೂವಾರಿಯೇ ಪೊಲೀಸ್ ಇಸ್ಮಾಯಿಲ್.
ಶ್ರೀನಿವಾಸ್ ಮನೆ ಮುಂದೆ ಸ್ಫೋಟಕ ಇಡುವುದು, ನಕ್ಸಲ್ ಲಿಂಕ್‌ಕೊಟ್ಟು ಶ್ರೀನಿವಾಸ್‌ನನ್ನು ಜೈಲಿಗಟ್ಟುವುದು ಅವರ ಪ್ರಧಾನ ಗುರಿ. ಈ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧವಾಗುತ್ತದೆ.
ಸ್ಫೋಟಕ ವಸ್ತು ಪೂರೈಕೆ ಮಾಡಲು ಕಲ್ಲುಗಂಗೂರು ಕಲ್ಲುಕ್ವಾರಿಯಲ್ಲಿ ಕೆಲಸ ಮಾಡುವ ವೀರಪ್ಪನನ್ನು ಇಸ್ಮಾಯಿಲ್ ಬಳಸಿಕೊಳ್ಳುತ್ತಾನೆ. ಬ್ಯಾಗ್‌ನಲ್ಲಿ ಜಿಲಿಟನ್ ಕಡ್ಡಿಯೊಂದಿಗೆ ಯೂರಿಯಾ, ಕೇಪನ್ನು ಹಾಕುತ್ತಾರೆ. ಇಷ್ಟಕ್ಕೆ ಸೀಮಿತವಾಗದೇ, ಬ್ಯಾಗಿಗೆ ಮಂಕಿಕ್ಯಾಪ್, ಒಂದಷ್ಟು ಔಷಧಿಗಳನ್ನು ಖರೀದಿಸಿ ತುಂಬುತ್ತಾರೆ. ಇಷ್ಟೇ ಅಲ್ಲದೇ, ಜ.26ರಂದು ಸ್ಫೋಟಿಸುವ ಬೆದರಿಕೆಯ ಪತ್ರವನ್ನು ಅದರಲ್ಲಿಡುತ್ತಾರೆ.
ಯೋಜನೆ ಪ್ರಕಾರ ಸ್ಫೋಟಕವಿರುವ ಬ್ಯಾಗನ್ನು 12ರಂದು ಮಧ್ಯರಾತ್ರಿ ಶ್ರೀನಿವಾಸನ ಮನೆ ಮುಂದೆ ಇಟ್ಟು ಬಂದು ಕಂಟ್ರೋಲ್ ರೂಂಗೆ ಕರೆ ಮಾಡುತ್ತಾರೆ.
ಬ್ಯಾಗ್‌ಗಳನ್ನು ಶ್ರೀನಿವಾಸ್ ಮನೆಯಲ್ಲಿ ಇಡುವುದಕ್ಕೂ ಮುನ್ನ ಪೊಲೀಸರಿಗೆ ತಮ್ಮ ಮೇಲೆ ಅನುಮಾನ ಬರದಿರಲೆಂದು ಸುರೇಶ್ ತನ್ನಿಬ್ಬರು ಸ್ನೇಹಿತರೊಂದಿಗೆ ಮಂಗಳೂರಿನ ಮೂಲಕ ಶಬರಿಮಲೈಗೆ ತೆರಳುವ ಯೋಜನೆ ರೂಪಿಸಿದರೆ, ಇಸ್ಮಾಯಿಲ್ ಬೆಂಗಳೂರಿಗೆ ತೆರಳುತ್ತಾರೆ. ಆದರೆ ಅವರಿಬ್ಬರು ಮೊಬೈಲ್ ಪೋನ್‌ಗಳ ಮೂಲಕ ಸಂಪರ್ಕದಲ್ಲಿರುತ್ತಾರೆ.
ಸುರೇಶ್ ಶಿವಮೊಗ್ಗದಿಂದ ಮಂಗಳೂರಿಗೆ ತೆರಳಿ ಅಲ್ಲಿಂದ ರೈಲಿನಲ್ಲಿ ಕೇರಳದ ಕೊಟ್ಟಾಯಂಗೆ ತನ್ನಿಬ್ಬರು ಸ್ನೇಹಿತರೊಂದಿಗೆ ತೆರಳುತ್ತಾನೆ. ಆದರೆ ಮಾರ್ಗ ಮಧ್ಯದ ನಿಲ್ದಾಣವೊಂದರಲ್ಲಿ ತನ್ನಿಬ್ಬರು ಸ್ನೇಹಿತರಿಗೆ ಸುರೇಶ್ ನೆಪ ಹೇಳಿ ರೈಲಿನಿಂದ ಇಳಿಯುತ್ತಾನೆ. ಆದರೆ ತನ್ನ ಮೊಬೈಲನ್ನು ಬೇಕೆಂದೇ ರೈಲಿನಲ್ಲಿಯೇ ಬಿಡುತ್ತಾನೆ. ತದನಂತರ ನೇರವಾಗಿ ಮತ್ತೆ ಶಿವಮೊಗ್ಗಕ್ಕೆ ಹಿಂದಿರುಗುತ್ತಾನೆ.
ಜ.12ರ ರಾತ್ರಿ ಕಾರಿನಲ್ಲಿ ತನ್ನ ಸಹಚರ ಮುನಿಯಪ್ಪನೊಂದಿಗೆ ಸೇರಿಕೊಂಡು ಶ್ರೀನಿವಾಸ್ ಮನೆಯ ಕಾಂಪೌಂಡ್ ಆವರಣದಲ್ಲಿ ಸ್ಫೋಟಕ ವಸ್ತು ತುಂಬಿದ್ದ ಎರಡು ಬ್ಯಾಗ್‌ಗಳನ್ನು ಇಡುತ್ತಾನೆ. ಹಾಗೆಯೇ ಜ.13ರ ನಸುಕಿನಲ್ಲೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮೂಲಕ ಪೊಲೀಸ್ ಕಂಟ್ರೋಲ್ ರೂಂಗೆ ಅನಾಮಧೇಯ ವ್ಯಕ್ತಿಯ ಹೆಸರಿನಲ್ಲಿ ಪೋನ್ ಮಾಡಿ ಶ್ರೀನಿವಾಸ್ ಮನೆಯಲ್ಲಿ ಸ್ಫೋಟಕ ವಸ್ತುಗಳಿರುವ ವಿಷಯ ತಿಳಿಸುತ್ತಾನೆ. ಜೊತೆಗೆ ಅಲ್ಲಿಂದ ಬಸ್ಸು ಹತ್ತಿ ಕೊಟ್ಟಾಯಂ ತಲುಪಿ ಅಲ್ಲಿಂದ ಶಬರಿಮಲೆಗೂ ಹೋಗಿಬಿಡುತ್ತಾನೆ.
ಪ್ರಕರಣದ ಜಾಡು ಹಿಡಿದ ಪೊಲೀಸರು ಕಾಯಿನ್ ಬಾಕ್ಸ್ ನಂಬರ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ್ದು ಎಂದು ಗೊತ್ತಾಗುತ್ತದೆ. ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದ ದೃಶ್ಯಾವಳಿ ಸಂಗ್ರಹಿಸುತ್ತಾರೆ. ಈ ದೃಶ್ಯಾವಳಿಗಳಲ್ಲಿ ಪೊಲೀಸ್ ಇಸ್ಮಾಯಿಲ್ ಹಾಗೂ ಆರೋಪಿ ಸುರೇಶ್ ಜೊತೆಯಾಗಿ ಓಡಾಡುವುದು ಗೊತ್ತಾಗುತ್ತದೆ. ನಂತರ ಅವರ ಮೊಬೈಲ್ ಸಂಭಾಷಣೆಯ ವಿವರವನ್ನು ಗುಪ್ತವಾಗಿ ಸಂಗ್ರಹಿಸುತ್ತಾರೆ. ಸಮಗ್ರ ವಿವರ ಸಂಗ್ರಹಿಸಿದ ನಂತರ ನಾಲ್ವರ ಆರೋಪಿಗಳನ್ನು ಶನಿವಾರ ಬಂಧಿಸುತ್ತಾರೆ. ವಿಚಾರಣೆಯ ವೇಳೆ ವೃತ್ತಿ ವೈಷ್ಯಮದ ವೃತ್ತಾಂತ ಬೆಳಕಿಗೆ ಬರುತ್ತದೆ.
ಸಿಪಿಐ ಜೈರಾಜ್, ಪಿಎಸ್‌ಐ ಚೈತನ್ಯ ಮತ್ತವರ ಸಿಬ್ಬಂದಿ ಶ್ರೀನಿವಾಸ್, ಜಗದೀಶ್ ಹಾಗೂ ಇತರೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಆರೋಪಿಗಳನ್ನು ಬಂಧಿಸಿ ನಿಗೂಢವಾದ ಪ್ರಕರಣವನ್ನು ಬೇಧಿಸುವಂತಾಗಿದೆ. ಇವರ ಕಾರ್ಯಾಚರಣೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಶ್ಲಾಘಿಸಿದ್ದಾರೆ.