ಪೋಲಿಯೋ ಲಸಿಕೆ ಹಾಕಿಸಲು ಪರದಾಟ
ಸೊರಬ: ಪೋಲಿಯೋ ರೋಗವನ್ನು ದೇಶದಿಂದ ತೊಲಗಿಸುವ ಅಭಿಯಾನದ ಹಿನ್ನೆಲೆಯಲ್ಲಿ ಪೋಲಿಯೋ ಹನಿ ಹಾಕುವ ಕಾರ್ಯಕ್ರಮ ಭಾನುವಾರ ತಾಲೂಕಿನೆಲ್ಲೆಡೆ ಭಾನುವಾರ ನಡೆಯಿತು.
ಪಟ್ಟಣದ ಪಪಂ ಕಚೇರಿ ಆವರಣದಲ್ಲಿ ಪ್ರತಿಬಾರಿ ಪೋಲಿಯೋ ಹನಿ ಹಾಕುವ ಬೂತ್, ಈ ಬಾರಿ ಬಸ್ ನಿಲ್ದಾಣದ ಹಿಂಬದಿ ಕಾಂಪ್ಲೆಕ್ಸ್ಗೆ ಸ್ಥಳಾಂತರಿಸಿದ್ದರಿಂದ ಜನತೆಗೆ ಬೂತ್ ಹುಡುಕುವುದೆ ಕೆಲಸವಾಯಿತು. ಈ ಬದಲಾವಣೆ ಕುರಿತು ಯಾವುದೇ ಮುನ್ಸೂಚನೆ ಇರಲಿಲ್ಲ, ತಾಲೂಕಿನ ಚಿತ್ರಟ್ಟೆಹಳ್ಳಿ ಗ್ರಾಮವೂ ಸೇರಿದಂತೆ ಇನ್ನೂ ಅನೇಕ ಕಡೆ ಆಶಾ ಕಾರ್ಯಕರ್ತೆಯರು ಎರಡು ಪೋಲಿಯೋ ಹನಿ ಹಾಕುವ ಬದಲು ಒಂದೆ ಹನಿ ಹಾಕಿದ್ದು, ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಯಿತು. ಕೆಲವರು ಸೊರಬಕ್ಕೆ ಬಂದು ಇನ್ನೊಂದು ಹನಿ ಹಾಕಿಸಿಕೊಂಡರು.
ತಾಲೂಕಿನಲ್ಲಿ 0- 5 ವರ್ಷದ 17,388 ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮವಿದ್ದು, 16,694 ಮಕ್ಕಳಿಗೆ 1019 ವಾಯಲ್ಗಳ ಮೂಲಕ 20,300 ಡೌಸ್ಗಳನ್ನು ನೀಡುವ ಮೂಲಕ ಮೊದಲ ದಿನ ಶೇ.96.01 ರಷ್ಟು ಸಾಧನೆಯಾಗಿದೆ.
ಕಾರ್ಯಕ್ರಮದ ಮೊದಲ ದಿನ ಪೋಲಿಯೋ ಬೂತ್ಗಳಲ್ಲಿ ಹಾಗೂ ಉಳಿದ ಮಕ್ಕಳಿಗೆ 2-3 ದಿನಗಳಲ್ಲಿ ಮನೆಮನೆ ಭೇಟಿ ಮೂಲಕ 0- 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೇ ವಲಸೆ ಬಂದಿರುವ ಸಮುದಾಯದ ಮಕ್ಕಳು ಸಾಮಾನ್ಯ ಲಸಿಕಾ ಕಾರ್ಯಕ್ರಮದಲ್ಲಿ ನೀಡುವ ಲಸಿಕೆಗಳಿಂದ ವಂಚಿತರಾಗದೇ ಇರಲು ಲಸಿಕಾ ದಿನಗಳ ಕಾರ್ಯಕ್ರಮವನ್ನು ಕಟ್ಟೆಚ್ಚರವಾಗಿ ನಿರ್ವಹಿಸಲಾಗುತ್ತಿದೆ.
ಒಟ್ಟು 216 ಟೀಮ್ಗಳನ್ನು ರಚಿಸಲಾಗಿದ್ದು, ಸರ್ಕಾರದಿಂದ 400, ಸ್ವಯಂ ಸೇವಾ ಸಂಸ್ಥೆಗಳಿಂದ 40 ವ್ಯಾಕ್ಸಿನೇಟರ್ಗಳನ್ನು, 24 ಸೂಪರ್ವೈಸರ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. 306 ಹಳ್ಳಿಗಳಿಗೆ 54 ಸಬ್ ಸೆಂಟರ್ಗಳನ್ನು ತೆರೆದಿದ್ದು, 39 ಗ್ರಾ.ಪಂ. ಗಳಲ್ಲಿ 108 ಬೂತ್ಗಳನ್ನು ತೆರೆಯಲಾಗಿದೆ. ಪ್ರತಿ ಬೂತ್ನಲ್ಲಿ 4 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತಿದ್ದಾರೆ. ಇದಕ್ಕಾಗಿ 4 ವೈದ್ಯರು, 6 ಹಿರಿಯ, 17 ಕಿರಿಯ ಆರೋಗ್ಯ ಸಹಾಯಕರು, 2 ಕ್ಷೇತ್ರ ಆರೋಗ್ಯಾಧಿಕಾರಿ, 4 ಎಲ್ಎಚ್ವಿ, 46 ಎಎನ್ಎಮ್, 125 ಆಶಾ, 325 ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದ್ದು, ಜಿಲ್ಲಾ ನೋಡಲ್ ಅಧಿಕಾರಿ ಡಾ. ರುದ್ರೇಶ್ ಹಾಗೂ ಡಾ. ಕೊಟ್ರಪ್ಪ ಇವರ ತಂಡ ಮೇಲುಸ್ತುವಾರಿ ವಹಿಸಿದ್ದರು. ಸ್ಥಳಕ್ಕೆ ಡಿಎಚ್ಒ ಡಾ.ಶಿವಣ್ಣ ಆಗಮಿಸಿದ್ದರು ಎಂದು ಇಲಾಖೆ ತಿಳಿಸಿದೆ.