ಮೈಸೂರು, ಬೆಂಗಳೂರಿಂದ ಶಿವಮೊಗ್ಗಕ್ಕೆ ಬ್ರೌನ್ಷುಗರ್
ಶಿವಮೊಗ್ಗ: ಮೇಲ್ನೋಟಕ್ಕೆ ಮೈಸೂರು, ಬೆಂಗಳೂರು ಮತ್ತಿತರೆಡೆಯಿಂದ ಶಿವಮೊಗ್ಗಕ್ಕೆ ಬ್ರೌನ್ಷುಗರ್ ಸರಬರಾಜಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಕ್ಕಾಲುಪಾಲು ಕಾಲೇಜು ವಿದ್ಯಾರ್ಥಿಗಳೇ ಮಾದಕ ವಸ್ತುಗಳ ಬಳಕೆ ಮಾಡುತ್ತಿರುವ ಅಂಶಗಳು ಪ್ರಾರಂಭಿಕ ತನಿಖೆಯಿಂದ ತಿಳಿದುಬಂದಿದೆ.
- ಹೀಗೆಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಖಚಿತವಾಗಿ ಹೇಳಿದ್ದಾರೆ. ಈ ಮೂಲಕ ಶಿವಮೊಗ್ಗ ನಗರ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಬ್ರೌನ್ ಷುಗರ್ ಮಾಫಿಯಾ ವ್ಯವಸ್ಥಿತವಾಗಿ ದೊಡ್ಡಮಟ್ಟದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಸಾಧ್ಯತೆ ದಟ್ಟವಾಗಿದೆ.
ಬಹಳ ಹಿಂದಿನಿಂದಲೂ...: ಇದು ವಾರದ ಹಿಂದೆ, ತಿಂಗಳಿಂದಲೋ ಆರಂಭವಾಗಿದ್ದಲ್ಲ ಎಂಬುದನ್ನೂ ಸಹ ಎಸ್ಪಿಯವರೇ ಖಚಿತಪಡಿಸಿದ್ದಾರೆ. ಈ ಮೂಲಕ ಬಹು ದಿನಗಳಿಂದ ವ್ಯವಸ್ಥಿತವಾಗಿ ಜಾಲ ಬೇರು ಬಿಟ್ಟಿದೆ ಎಂಬ ಸಂಗತಿ ಖಚಿತವಾದಂತಾಗಿದೆ. ಬಹುದಿನಗಳಿಂದ ಡ್ರಗ್ ಮಾಫಿಯಾ ಬಗ್ಗೆ ಕಾಲೇಜು ವಲಯಗಳಲ್ಲಿ ಗುಸುಗುಸು ಕೇಳಿಬಂದಿದ್ದರೂ ಖಚಿತ ಮಾಹಿತಿ ಇರಲಿಲ್ಲ. ಆದರೆ, ಶುಕ್ರವಾರ ನಗರದ ಸಹ್ಯಾದ್ರಿ ಕಾಲೇಜು ಬಳಿಯ ನಿರ್ಜನ ಪ್ರದೇಶದಲ್ಲಿ ಖಚಿತ ವರ್ತಮಾನದ ಮೇರೆಗೆ ರೌಡಿ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ, ಮಾದಕ ವಸ್ತು ಬ್ರೌನ್ ಷುಗರ್ ಮಾರಾಟ ಜಾಲದ ಐವರನ್ನು ಬಂಧಿಸಿದ್ದರು. ಈ ಜಾಲದ ವಿಸ್ತಾರ ದೊಡ್ಡದಿದೆ ಎನಿಸುತ್ತಿದೆ. ತನಿಖೆಯನ್ನು ತೀವ್ರಗೊಳಿಸುತ್ತೇವೆ. ನಂತರ ಎಲ್ಲವೂ ಗೊತ್ತಾಗುತ್ತದೆ ಎಂದು ಎಸ್ಪಿ ಕೌಶಲೇಂದ್ರ ಕುಮಾರ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.