ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೈಸೂರು, ಬೆಂಗಳೂರಿಂದ ಶಿವಮೊಗ್ಗಕ್ಕೆ ಬ್ರೌನ್‌ಷುಗರ್

Mainashree
Updated On : 20 Jan 2014, 10:59 am

ಕ.ಪ್ರ.ವಾರ್ತೆ   ಶಿವಮೊಗ್ಗ   ಜ. 19
ಮೇಲ್ನೋಟಕ್ಕೆ ಮೈಸೂರು, ಬೆಂಗಳೂರು ಮತ್ತಿತರೆಡೆಯಿಂದ ಶಿವಮೊಗ್ಗಕ್ಕೆ ಬ್ರೌನ್‌ಷುಗರ್ ಸರಬರಾಜಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಕ್ಕಾಲುಪಾಲು ಕಾಲೇಜು ವಿದ್ಯಾರ್ಥಿಗಳೇ ಮಾದಕ ವಸ್ತುಗಳ ಬಳಕೆ ಮಾಡುತ್ತಿರುವ ಅಂಶಗಳು ಪ್ರಾರಂಭಿಕ ತನಿಖೆಯಿಂದ ತಿಳಿದುಬಂದಿದೆ.
- ಹೀಗೆಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಖಚಿತವಾಗಿ ಹೇಳಿದ್ದಾರೆ.
ಈ ಮೂಲಕ ಶಿವಮೊಗ್ಗ ನಗರ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಬ್ರೌನ್ ಷುಗರ್ ಮಾಫಿಯಾ ವ್ಯವಸ್ಥಿತವಾಗಿ ದೊಡ್ಡಮಟ್ಟದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಸಾಧ್ಯತೆ ದಟ್ಟವಾಗಿದೆ.
ಬಹಳ ಹಿಂದಿನಿಂದಲೂ...: ಇದು ವಾರದ ಹಿಂದೆ, ತಿಂಗಳಿಂದಲೋ ಆರಂಭವಾಗಿದ್ದಲ್ಲ ಎಂಬುದನ್ನೂ ಸಹ ಎಸ್ಪಿಯವರೇ ಖಚಿತಪಡಿಸಿದ್ದಾರೆ. ಈ ಮೂಲಕ ಬಹು ದಿನಗಳಿಂದ ವ್ಯವಸ್ಥಿತವಾಗಿ ಜಾಲ ಬೇರು ಬಿಟ್ಟಿದೆ ಎಂಬ ಸಂಗತಿ ಖಚಿತವಾದಂತಾಗಿದೆ.
ಬಹುದಿನಗಳಿಂದ ಡ್ರಗ್ ಮಾಫಿಯಾ ಬಗ್ಗೆ ಕಾಲೇಜು ವಲಯಗಳಲ್ಲಿ ಗುಸುಗುಸು ಕೇಳಿಬಂದಿದ್ದರೂ ಖಚಿತ ಮಾಹಿತಿ ಇರಲಿಲ್ಲ. ಆದರೆ, ಶುಕ್ರವಾರ ನಗರದ ಸಹ್ಯಾದ್ರಿ ಕಾಲೇಜು ಬಳಿಯ ನಿರ್ಜನ ಪ್ರದೇಶದಲ್ಲಿ ಖಚಿತ ವರ್ತಮಾನದ ಮೇರೆಗೆ ರೌಡಿ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ, ಮಾದಕ ವಸ್ತು ಬ್ರೌನ್ ಷುಗರ್ ಮಾರಾಟ ಜಾಲದ ಐವರನ್ನು ಬಂಧಿಸಿದ್ದರು.
ಈ ಜಾಲದ ವಿಸ್ತಾರ ದೊಡ್ಡದಿದೆ ಎನಿಸುತ್ತಿದೆ. ತನಿಖೆಯನ್ನು ತೀವ್ರಗೊಳಿಸುತ್ತೇವೆ. ನಂತರ ಎಲ್ಲವೂ ಗೊತ್ತಾಗುತ್ತದೆ ಎಂದು ಎಸ್ಪಿ ಕೌಶಲೇಂದ್ರ ಕುಮಾರ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಪೊಲೀಸ್ ಪಾಲುದಾರ: ಮೊನ್ನೆ ನಡೆದ ಘಟನೆಯಲ್ಲಿ ಪೊಲೀಸ್ ಪೇದೆಯೊಬ್ಬರು ಸಿಕ್ಕಿಬಿದ್ದಿರುವುದು ಮಾಫಿಯಾದ ವ್ಯಾಪ್ತಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂಬುದಕ್ಕೆ ಪುರಾವೆ ಎಂಬಂತಾಗಿದೆ. ಪೊಲೀಸ್ ಸಿಬ್ಬಂದಿಯೇ ಜಾಲದ ಪಾಲುದಾರನಾಗಿದ್ದರಿಂದ ಸುಲಭವಾಗಿ ಬ್ರೌನ್‌ಷುಗರ್ ಶಿವಮೊಗ್ಗಕ್ಕೆ ಪ್ರವೇಶ ಪಡೆಯುತ್ತಿತ್ತು.
ನಂತರ ಅದು ಗೌಪ್ಯವಾಗಿ ಹಂಚಿಕೆಯಾಗುತ್ತಿತ್ತು. ಶಿವಮೊಗ್ಗ ಹೊರವಲಯದಲ್ಲಿ ವ್ಯಾಪಾರ ನಡೆಯುವಂತೆ ನೋಡಿಕೊಳ್ಳಲಾಗುತ್ತಿತ್ತು ಎಂದು ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಮಾಹಿತಿಗಳ ಪ್ರಕಾರ ಸಹ್ಯಾದ್ರಿ ಕಾಲೇಜು ಸೇರಿದಂತೆ ನಗರದ ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮಾಫಿಯಾದ ಪ್ರಮುಖ ಗ್ರಾಹಕರು. ಇಷ್ಟೇ ಅಲ್ಲದೇ ಪಿಯುಸಿ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದ್ದಾರೆ ಎಂಬ ಮಾಹಿತಿ ಇದೆ. ತನಿಖೆಯಿಂದ ಗೊತ್ತಾಗಬೇಕಷ್ಟೆ ಎಂದು ಹೇಳಿದ್ದಾರೆ.
ಮುಂದೇನು? ಪ್ರಾಥಮಿಕ ತನಿಖೆಯಿಂದ ಮೈಸೂರು, ಬೆಂಗಳೂರು ಲಿಂಕಕ್ಸಿಕ್ಕಿದೆ. ಕಾರ್ಕಳ ಲಿಂಕ್ ಸಹ ಇರುವ ಸೂಕ್ಷ್ಮ ಸಿಕ್ಕಿದೆ. ಅಲ್ಲಿನ ಪ್ರಮುಖ ಕಾಲೇಜೊಂದು ಹಲವು ವರ್ಷಗಳ ಹಿಂದೆಯೇ ಡ್ರಗ್ಸ್ ಮಾಫಿಯಾದ ಕಪ್ಪುಚುಕ್ಕೆ ಗಿಟ್ಟಿಸಿತ್ತು. ಇದೀಗ ಕಾರ್ಕಳ ಲಿಂಕ್ ಮತ್ತೊಮ್ಮೆ ಸಾಬೀತುಗೊಂಡಿದೆ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement