ರೋಗಪೀಡಿತ ತ್ಯಾಗರ್ತಿ ಆರೋಗ್ಯ ಕೇಂದ್ರ
ತ್ಯಾಗರ್ತಿ: ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲೊಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಈ ಕೇಂದ್ರಕ್ಕೆ ರೋಗ ಬಡಿದಿದ್ದು, ನಿತ್ರಾಣ ಸ್ಥಿತಿ ತಲುಪಿದೆ.
ಅಲ್ಲಿ ವೈದ್ಯಾಧಿಕಾರಿಗಳಿಲ್ಲ, ಔಷಧಿ ವಿತರಕರೂ ಇಲ್ಲ. ಇನ್ನೂ ಹೇಳಬೇಕೆಂದರೆ ಕಟ್ಟಡ ಶಿಥಿಲಾವಸ್ಥೆಯಿಂದ ಕೂಡಿದೆ. ಬರೂರು, ಹಿರೇಬಿಲಗುಂಜಿ, ತ್ಯಾಗರ್ತಿ ಗ್ರಾಪಂ ವ್ಯಾಪ್ತಿಗೆ ಸೇರಿದಂತೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇದಾಗಿದ್ದು, ದಾಖಲೆಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸಬೇಕು.
ಆದರೆ, ಇದು ಅವ್ಯವಸ್ಥೆಯ ಆಗರವಾಗಿದೆ. 6 ಹಾಸಿಗೆಯನ್ನೊಳಗೊಂಡ ಪ್ರಾಥಮಿಕ ಕೇಂದ್ರವು 13 ತಿಂಗಳಿಂದ ವೈದ್ಯಾಧಿಕಾರಿಯನ್ನೇ ಕಂಡಿಲ್ಲ. ಹಾಗೆಯೇ ಹಲವು ವರ್ಷಗಳಿಂದ ಔಷಧಿ ವಿತರಕರು ಇಲ್ಲದೇ ಆಸ್ಪತ್ರೆಯು ಸಿಬ್ಬಂದಿಯ ಕೊರತೆಯಿಂದ ನರಳುತ್ತಿದೆ.
3 ಶುಶ್ರುಷಾ ದಾದಿಯರು ಇರಬೇಕಾದ ಆಸ್ಪತ್ರೆಯಲ್ಲಿ ಇಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ.
ಶಿಥಿಲ: ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಸಮಾಜ ಕಲ್ಯಾಣ ಮತ್ತು ಆರೋಗ್ಯ ಸಚಿವರಾಗಿದ್ದಾಗ ಉದ್ಘಾಟಿಸಿದ ಈ ಕಟ್ಟಡ ಕಳಪೆ ಕಾಮಗಾರಿಯಿಂದ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಪ್ರಸವ ಕೊಠಡಿ, ಚಿಕಿತ್ಸಾ ಕೊಠಡಿ, ತಪಾಸಣಾ ಕೊಠಡಿಗಳೆಲ್ಲವೂ ಸೋರುತ್ತದೆ.
ಶೌಚಾಲಯವಂತೂ ಸ್ವಚ್ಛತೆಯಿಲ್ಲದೇ ಗಬ್ಬೆದ್ದಿದೆ. ಇದಕ್ಕೆಲ್ಲಾ ಕಾರಣ ಸಿಬ್ಬಂದಿ ಕೊರತೆ ಕಾರಣ. ಇದುವರೆಗೂ ಜನಪ್ರತಿನಿಧಿಗಳು ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿದೆ ಇರುವುದು ವಿಷಾದನೀಯ ಸಂಗತಿ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ಒಟ್ಟಾರೆ ಜನಪ್ರತಿನಿಧಿಗಳು, ಅಧಿಕಾರಿಗಳ ಉದಾಸೀನದಿಂದಾಗಿ ಆರೋಗ್ಯ ಕೇಂದ್ರಕ್ಕೆ ರೋಗ ಬಡಿದುಕೊಂಡಿದೆ.