ವಿಐಎಸ್ಎಲ್ ಗತವೈಭವ ಮರುಕಳಿಸಲಿದೆ
ಕ.ಪ್ರ.ವಾರ್ತೆ ಭದ್ರಾವತಿ ಜ.19
ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಇನ್ನೆರಡು ವರ್ಷಗಳಲ್ಲಿ ತನ್ನ ಗತವೈಭವವನ್ನು ಮರಳಿ ಪಡೆಯುವ ಸಾಧ್ಯತೆಗಳಿವೆ ಎಂದು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಎಂ.ರವಿ ನುಡಿದರು.
ವಿಐಎಸ್ಎಲ್ ಉತ್ಸವ ಸಮಿತಿಯು ಕಾರ್ಖಾನೆಯ ರಜತ ಮಹೋತ್ಸವ ಕ್ರೀಡಾಂಗಣದ ಅಮೃತ ಮಹೋತ್ಸವ ವೇದಿಕೆಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಿಐಎಸ್ಎಲ್ ಕಾರ್ಖಾನೆ ಅಭಿವೃದ್ಧಿ ಕುರಿತಂತೆ ಭಾರತೀಯ ಉಕ್ಕು ಪ್ರಾಧಿಕಾರದ ಹಣಕಾಸು ನಿರ್ದೇಶಕರು ಮತ್ತು ತಾಂತ್ರಿಕ ನಿರ್ದೇಶಕರೊಂದಿಗೆ ತಾವು ಮಾತುಕತೆ ನಡೆಸಿದ್ದು ಅವರು ಅದಕ್ಕೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದರು.
ಗಣಿ ಲಭ್ಯತೆ ಮುಖ್ಯ: ನಾವೆಲ್ಲರೂ ಒಟ್ಟಾಗಿ ಕಾರ್ಖಾನೆಯ ಸಮಸ್ಯೆಗಳನ್ನು ನಿವಾರಿಸೋಣ. ಕಾರ್ಖಾನೆಯಲ್ಲಿನ ಕಚ್ಚಾ ಸಾಮಾಗ್ರಿ ವ್ಯರ್ಥವಾಗುವುದನ್ನು ತಗ್ಗಿಸಿ ಬೇಡಿಕೆಗನುಗುಣವಾಗಿ ಉತ್ಪಾದನೆಯನ್ನು ಮಾಡಿದ್ದೇ ಆದರೆ ಬಹಳಷ್ಟು ಸಮಸ್ಯೆಗಳನ್ನು ನಿವಾರಿಸಬಹುದು. ಕಬ್ಬಿಣದ ಅದಿರಿನ ಗಣಿ ಲಭ್ಯತೆಯೊಂದೇ ಕಾರ್ಖಾನೆಯ ಮುಂದಿರುವ ಗಂಭೀರ ಸಮಸ್ಯೆಯಾಗಿದೆ. ಅದಕ್ಕೆ ಪರಿಹಾರ ಸಿಕ್ಕರೆ ಕಾರ್ಖಾನೆ ಇನ್ನೊಂದು ವರ್ಷದಲ್ಲಿ ತನ್ನ ಗತವೈಭವದ ಹಾದಿಯತ್ತ ಸಾಗುವುದರಲ್ಲಿ ಅನುಮಾನವಿಲ್ಲವೆಂದು ಅವರು ನುಡಿದರು.
ಇದಕ್ಕೆ ಮುನ್ನ ಮಾತನಾಡಿದ ವಿಐಎಸ್ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ.ಎನ್.ಚಂದ್ರಹಾಸ, ಉಕ್ಕು ಪ್ರಾಧಿಕಾರವು ವಿಐಎಸ್ಎಲ್ ಕಾರ್ಖಾನೆಯನ್ನು ಜಂಟಿ ಮಾಲಿಕತ್ವದ ಮೇಲೆ ನಡೆಸುವ ಪ್ರಸ್ತಾವನೆ ಮಾಡಿದಾಗ ಅದನ್ನು ತಮ್ಮ ಸಂಘವು ವಿರೋಧಿಸಿ ಪ್ರತಿಭಟನೆ ಮಾಡಿತು. ಇದಕ್ಕೆ ಸಂಸದರು, ಭದ್ರಾವತಿ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು, ಅನೇಕ ಮುಖಂಡರುಗಳು ಬೆಂಬಲಿಸಿದ್ದನ್ನು ಅವರು ಸ್ಮರಿಸಿದರು.
ಸಿಎಂ ಮಾತುಕತೆ ನಡೆಸಲಿ: ಉಕ್ಕು ಪ್ರಾಧಿಕಾರದ ಅಧ್ಯಕ್ಷರು ಕಬ್ಬಿಣದ ಅದಿರಿನ ಮಂಜೂರಾತಿ ಕುರಿತಂತೆ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಈ ಸದವಕಾಶವನ್ನು ಸ್ಥಳೀಯ ರಾಜಕಾರಣಿಗಳು ಸದ್ಬಳಕೆ ಮಾಡಿಕೊಂಡು ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಒತ್ತಾಯ ತಂದು ಈ ಮಾತುಕತೆ ಆದಷ್ಟು ಬೇಗ ಆಗುವಂತೆ ಮಾಡಬೇಕೆಂದು ಅವರು ಆಗ್ರಹಿಸಿದರು.
ವಿಐಎಸ್ಎಲ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಎಂ.ರವಿಶಂಕರ್ ಮಾತನಾಡಿ, ಕಾರ್ಖಾನೆಯಲ್ಲಿ 2013-14ರ ಕಾರ್ಯಚಟುವಟಿಕೆಗಳು ಬಹುತೇಕ ಸ್ಥಗಿತವಾಗುವ ಸ್ಥಿತಿ ತಲಪಿವೆ ಎಂದು ವಿಷಾದಿಸಿದರು.
ವೇದಿಕೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಮಹಾಪ್ರಬಂಧಕ ಎ.ರಂಗರಾಜನ್ ಮತ್ತು ಗಣಿ, ಯೋಜನೆಗಳು ಮತ್ತು ಮಾರುಕಟ್ಟೆ ಮಹಾಪ್ರಬಂಧಕ ಧ್ರುಭ್ ಬ್ಯಾನರ್ಜಿ ಉಪಸ್ಥಿತರಿದ್ದರು.