ಪಠ್ಯ ಶಿಕ್ಷಣಕ್ಕೆ ಸೀಮಿತವಾಗದಿರಿ: ವೆಂಕಟೇಶ್ ಪೈ ಅಭಿಮತ
ಶಿವಮೊಗ್ಗ: ಮಗು ಪಠ್ಯ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೇ ಅವರಲ್ಲಿ ಅಡಗಿರುವ ಹಲವು ವಿಚಾರ ಕುರಿತು ತಮ್ಮ ಚಿಂತನೆ ವ್ಯಕ್ತಪಡಿಸಬೇಕು ಎಂದು ನಗರದ ಸೆಕ್ರೇಡ್ ಹಾರ್ಟ್ ಶಾಲೆಯ ವಿದ್ಯಾರ್ಥಿ ವೆಂಕಟೇಶ್ ಪೈ ಹೇಳಿದರು.
ಶಿವಮೊಗ್ಗ ತಾಲೂಕು ಕಸಾಪ ಆಯೋಜಿಸಿದ್ದ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಅವರು, ರಾಜ್ಯದಲ್ಲಿ ಕನ್ನಡದ ಜತೆಗೆ ಹಿಂದಿ, ಇಂಗ್ಲೀಷ್ ಭಾಷೆಯನ್ನೂ ಸಂಹವನಕ್ಕೆ ಹಾಗೂ ಕಾರ್ಯ ಚಟುವಟಿಕೆಗೆ ಬಳಸಲಾಗುತ್ತಿದೆ. ನಾವು ಯಾವ ಭಾಷೆಗೆ ಪ್ರಾಧಾನ್ಯತೆ ನೀಡಬೇಕು ಎಂದು ಆಲೋಚಿಸಬೇಕು ಎಂದರು.
ಬಾಲಕಾರ್ಮಿಕ: ಸಮ್ಮೇಳನಾಧ್ಯಕ್ಷೆ ಭಾರತೀಯ ವಿದ್ಯಾಭವನದ ವಿದ್ಯಾರ್ಥಿನಿ ಸಂಜನಾ, ರಾಜ್ಯ ಸರ್ಕಾರ ಮಕ್ಕಳ ಏಳಿಗೆಗಾಗಿ ಉಚಿತ ಶಿಕ್ಷಣವನ್ನೇನೋ ನೀಡುತ್ತಿದೆ. ಆದರೆ ಮಕ್ಕಳು ಇಂದಿಗೂ ಸಹ ಹೋಟೆಲ್, ಕಾರ್ಖಾನೆ, ಮನೆಗಳಲ್ಲಿ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿಷಾಧಿಸಿದರು.
ಬಾಲ ಕಾರ್ಮಿಕ- ಬಾಲ್ಯ ವಿವಾಹ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಲು ಇಂತಹ ಸಾಹಿತ್ಯ ಸಮ್ಮೇಳನಗಳು ಸ್ಫೂರ್ತಿಯಾಗಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ಭಾರತೀಯ ವಿದ್ಯಾಭವನದ ಅಧ್ಯಕ್ಷ ಎಚ್.ಎಸ್. ದಿವಾಕರ್, ಉಪಾಧ್ಯಕ್ಷ ಸುಬ್ರಹ್ಮಣ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಾನಾಯ್ಕ್, ತಾಲೂಕು ಕಸಾಪ ಅಧ್ಯಕ್ಷೆ ಶೀಲಾ ಸುರೇಶ್ ಇದ್ದರು.
ಸಮ್ಮೇಳನದಲ್ಲಿ ಚಿಣ್ಣರ ಚಿಲಿಪಿಲಿ, ಮಕ್ಕಳ ಕವಿಗೋಷ್ಠಿ ನಡೆಯಿತು. ವಿವಿಧ ವಿಚಾರಗಳನ್ನು ಕುರಿತು 12 ಮಕ್ಕಳು ನಂಬಿಕೆ ಮತ್ತು ಮೂಢನಂಬಿಕೆ, ಶೈಕ್ಷಣಿಕ ತಾರತಮ್ಯ, ಇಂಧನ ಮಹತ್ವ, ಶಿಕ್ಷಕರು ಮತ್ತು ಸಾಹಿತ್ಯಾಸಕ್ತಿ, ಎರಡು ಮಹಾ ಯುದ್ದಗಳು, ಭ್ರಷ್ಟಾಚಾರ ತೊಲಗಿಸಲು ನನ್ನ ಪಾತ್ರ, ಮಕ್ಕಳ ಹಕ್ಕು ಮತ್ತು ಜಾಗೃತಿ, ಭಾಷೆ ಮತ್ತು ಶಿಕ್ಷಣ, ಶಿಕ್ಷಣ ಸುಧಾರಣೆಗೆ ನನ್ನ ಸಲಹೆ, ಮಹಿಳೆ ಮತ್ತು ಶಿಕ್ಷಣ ಮೂಢನಂಬಿಕೆ ಸೇರಿದಂತೆ ಹಲವು ವಿಷಯಗಳನ್ನು ಮಂಡಿಸಲಿದ್ದಾರೆ.
ಹಳೇಗನ್ನಡ ಪದ್ಯವಾಚನ ಮತ್ತು ವಿಶ್ಲೇಷಣೆ ಗೋಷ್ಠಿ, ಕಲ್ಪನಾ ಕಥಾ ಸಿಂಚನಾ ಗೋಷ್ಠಿಗಳೂ ಮತ್ತಿತರೆ ಕಾರ್ಯಕ್ರಮಗಳು ನಡೆದವು.