ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಭಾಷಾಭಿಮಾನ ಕೊರತೆಯಿಂದ ಕನ್ನಡಕ್ಕೆ ದುಸ್ಥಿತಿ'

Mainashree
Updated On : 21 Jan 2014, 10:41 am

ಕ.ಪ್ರ.ವಾರ್ತೆ, ಭದ್ರಾವತಿ, ಜ.20
ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕನ್ನಡ ಭಾಷೆಯ ಮೇಲೆ ಭಾಷಾಭಿಮಾನ ಕಡಿಮೆ ಆಗಿರುವುದೇ ಕನ್ನಡ ಭಾಷೆಯ ಇಂದಿನ ದುಸ್ಥಿತಿಗೆ ಕಾರಣ ಎಂದು ಭದ್ರಾವತಿ ಶಾಸಕ ಎಂ.ಜೆ. ಅಪ್ಪಾಜಿ ದೂರಿದರು.
ಪಟ್ಟಣದ ಸಮೀಪವಿರುವ ಹಿರಿಯೂರು ಗ್ರಾಮದ ಬಯಲು ರಂಗಮಂದಿರದಲ್ಲಿ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹಿರಿಯೂರು ಹೋಬಳಿಮಟ್ಟದ ಕಸಾಪ ಹಮ್ಮಿಕೊಂಡಿದ್ದ ದ್ವಿತೀಯ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ 2ನೇ ದಿನದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಷೇಧಿಸಬೇಕು:  ರಾಜ್ಯದಲ್ಲಿ ಉನ್ನತ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯಬೇಕು ಮತ್ತು ಆಡಳಿತದಲ್ಲಿ ಹೆಚ್ಚು ಕನ್ನಡ ಬಳಕೆ ಆಗಬೇಕು. ವಿಧಾನಸೌಧದಲ್ಲಿ ಸಹ ಅನ್ಯ ಭಾಷೆಯಲ್ಲಿ ಪ್ರತಿಜ್ಞಾವಿಧಿ ಬೋಧಿಸುವುದನ್ನು ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ನಿಷೇಧಿಸಬೇಕು. ಕನ್ನಡಿಗರು ಉದಾರಿಗಳು. ಅನ್ಯ ಭಾಷೀಯರೊಂದಿಗೆ ಅವರ ಭಾಷೆಯಲ್ಲೇ ವ್ಯವಹರಿಸುತ್ತಾರೆ. ನಮ್ಮ ನಡೆ-ನುಡಿ ಮತ್ತು ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿದಾಗ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ ಮತ್ತು ಬೆಳೆಯುತ್ತದೆ. ಇಂತಹ ಸಾಹಿತ್ಯ ಸಮ್ಮೇಳನಗಳು ಈ ನಿಟ್ಟಿನಲ್ಲಿ ಹೆಚ್ಚು ಪ್ರಚೋದನಾತ್ಮಕ ಕಾರ್ಯಗಳನ್ನು ಮಾಡುವಂತಾಗಬೇಕೆಂದು ಅವರು ಆಶಿಸಿದರು.
ಜೀವನಶೈಲಿಯಂತೆ:  ಸಮ್ಮೇಳನಾಧ್ಯಕ್ಷೆ ಡಾ.ಸುಶೀಲಾ ನೆಲ್ಲಿಸರ ಮಾತನಾಡಿ, ಕನ್ನಡ ಕೇವಲ ಒಂದು ಭಾಷೆಯಲ್ಲ, ಅದೊಂದು ಜೀವನಶೈಲಿ. ಆಂಗ್ಲ ವ್ಯಾಮೋಹದಿಂದ ಕನ್ನಡ ಉಪೇಕ್ಷೆಗೊಳಗಾಗುತ್ತಿದೆ. ಕನ್ನಡಿಗರಲ್ಲದಿದ್ದರೂ ಕನ್ನಡ ಭಾಷೆ ಕಲಿತು ಕನ್ನಡ ಸಾರಸ್ವತ ಲೋಕಕ್ಕೆ ಮತ್ತು ಸಾಹಿತ್ಯ ಭಂಡಾರಕ್ಕೆ ಅಮೋಘವಾದ ಕೊಡುಗೆ ನೀಡಿದ ಅನೇಕ ಮಹನೀಯರು ಕನ್ನಡ ನಾಡಿನಲ್ಲಿ ಜೀವಿಸಿದ್ದಾರೆ.
ಅಂತಹ ಕನ್ನಡಾಭಿಮಾನವನ್ನು ಕನ್ನಡಿಗರಾದ ನಾವು ಮೆರೆಯಬೇಕಾಗಿದೆ. ಇಂದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕನ್ನಡ ಜೀವಂತವಾಗಿದೆ ಎಂದರು.
ಸರ್ಕಾರಿ ಶಾಲೆ ಸೊರಗುತ್ತಿವೆ:  ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಆಶಯ ಭಾಷಣದಲ್ಲಿ, ಕನ್ನಡಕ್ಕೆ ಕನ್ನಡಿಗರೇ ಶತ್ರುಗಳಾಗುತ್ತಿದ್ದಾರೆ ಎಂಬ ಅಂಶದ ಬಗ್ಗೆ ಅರಿವು ಮೂಡಿಸುವುದೇ ಈ ಸಮ್ಮೇಳನದ ಉದ್ದೇಶವಾಗಿದೆ.
ಅಧಿಕಾರದಲ್ಲಿರುವ ರಾಜಕಾರಣಿಗಳು ಶೈಕ್ಷಣಿಕ ರಂಗಕ್ಕೆ ಕಾಲಿಟ್ಟಿರುವುದರಿಂದಲೇ ಸರ್ಕಾರಿ ಶಾಲೆಗಳು ಸೊರಗುತ್ತಿವೆ. ಸರ್ಕಾರಿ ಶಿಕ್ಷಣ ನೀತಿಗಳು ಸರ್ಕಾರಿ ಶಾಲೆಗಳಿಗೆ ಪೂರಕವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ನಾಗೇಂದ್ರಪ್ಪ, ಸಿದ್ದೋಜಿರಾವ್ ಬೋಸ್ಲೆ ಮೊದಲಾದವರು ಮಾತನಾಡಿದರು.
ಹಿರಿಯೂರು ಗ್ರಾ.ಪಂ. ಅಧ್ಯಕ್ಷೆ ಆಶಾ ಲಕ್ಷ್ಮಿನಾರಾಯಣ, ರತ್ನಮ್ಮ, ಲಕ್ಷ್ಮಣಪ್ಪ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement