ರಸ್ತೆಗಳಲ್ಲಿ ರೋಗದ ರಾಸುಗಳ ಕಾಟ
ಕ.ಪ್ರ.ವಾರ್ತೆ, ಸೊರಬ, ಜ.20
ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ಅಧಿಕವಾಗಿದೆ. ರಾತ್ರಿ ಪೂರ್ಣ ಪೇಟೆಯ ಮುಖ್ಯರಸ್ತೆ, ಅಂಗಡಿ ಕಟ್ಟೆಗಳು ಮುಂತಾದೆಡೆ ದನಗಳು ಬೀಡುಬಿಡುತ್ತಿವೆ. ಇವುಗಳಿಗೆ ಮಾಲೀಕರು ಇದ್ದಾರೋ ಇಲ್ಲವೋ ಅನುಮಾನ ಎಂದು ಗೋಸಂರಕ್ಷಣಾ ಹೋರಾಟ ವೇದಿಕೆ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ ತಿಳಿಸಿದ್ದಾರೆ.
ಕಾಲುಬಾಯಿ ಜ್ವರ ಬಂದು ರಸ್ತೆಯಲ್ಲಿ ಬೀಳುವ ದನಗಳನ್ನು ನಿಗಾವಹಿಸಿ ನೋಡದಿರುವ ಮಾಲೀಕರ ತಾತ್ಸಾರಕ್ಕೆ ಬೇಸತ್ತಿರುವ ಸಾರ್ವಜನಿಕರೇ ಇವುಗಳ ಶುಶ್ರೂಷೆ ಮಾಡುತ್ತಿದ್ದಾರೆ. ಕಾಲುಬಾಯಿ ಜ್ವರದಿಂದ ಅವುಗಳ ಕಾಲು ಹುಳವಾಗಿ ಓಡಾಡಲಾಗದೆ ರಸ್ತೆಯಲ್ಲಿಯೇ ಸಾವನ್ನಪ್ಪುತ್ತಿವೆ. ಎಷ್ಟೋ ದನಕರುಗಳ ಮೇಲೆ ವಾಹನ ಹರಿದುಹೋಗಿ ಕಾಲು ಮುರಿದುಕೊಂಡಿವೆ. ಹಿಂಡು ಹಿಂಡು ಜಾನುವಾರುಗಳು ರಸ್ತೆಯಲ್ಲಿ ಇರುವುದರಿಂದ ರಾತ್ರಿ ವೇಳೆ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಯಾವುದಾದರೂ ವಾಹನ ಅಪಘಾತವಾದಾಗ ಪರಿಹಾರದ ಹಣ ಕೀಳಲು ಅವುಗಳ ಮಾಲೀಕರು ಬರುತ್ತಾರೆಯೆ ವಿನಹ ಬೇರೆ ವೇಳೆ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಕೂಡಲೇ ಪಟ್ಟಣ ಪಂಚಾಯಿತಿ ಆಡಳಿತ ಈ ಬಗ್ಗೆ ಗಮನಹರಿಸಿ, ಮಾಲೀಕರಿಗೆ ಬಹಿರಂಗ ತಿಳಿವಳಿಕೆ ನೀಡಬೇಕು. ಇಂತಹ ಜಾನುವಾರುಗಳನ್ನು ಯಾವುದಾದರೂ ಗೋಶಾಲೆಗೆ ಸೇರಿಸುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.