ಸುದ್ದಿ ಸಂಕ್ಷೇಪ
ನಾಳೆ ರಾಷ್ಟ್ರಕವಿಜಿಎಸ್ಸೆಸ್ ನೆನಪು
ಶಿವಮೊಗ್ಗ: ಶಿವಮೊಗ್ಗದ ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನವು ಭದ್ರಾವತಿಯ ಸರ್. ಎಂ.ವಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಜ.22ರಂದು ಅಗಲಿದ ರಾಷ್ಟ್ರಕವಿ ಜಿ.ಎಸ್.ಎಸ್. ಕುರಿತು “f.GÑé.GÑé. ಒಂದು «æ«Ú®Úâ’ ಎಂಬ ವಿಚಾರ ಸಂಕಿರಣವನ್ನು ಏರ್ಪಡಿಸಿದೆ. ಬೆಳಗ್ಗೆ 10.30ಕ್ಕೆ ಕವಿ ಸತ್ಯನಾರಾಯಣ ರಾವ್ ಅಣತಿ ಉದ್ಘಾಟಿಸಲಿದ್ದು, ನಂತರದ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಂಪರೆ ಮತ್ತು ಜಿಎಸ್ಸೆಸ್ಸ್ ಕುರಿತು ಡಿ.ಎಸ್. ನಾಗಭೂಷಣ, ಕನ್ನಡ ಕಾವ್ಯ ಮೀಮಾಂಸೆಗೆ ಜಿಎಸ್ಸೆಸ್ ಕೊಡುಗೆ ಕುರಿತು ತಾರಿಣಿ ಶುಭದಾಯಿನಿ ಮಾತನಾಡುವರು. ಇದೇ ಸಂದರ್ಭದಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಸವಿತಾ ನಾಗಭೂಷಣ, ಸತ್ಯನಾರಾಯಣರಾವ್ ಅಣತಿ, ತಾಣಿರಿ ಶುಭದಾಯಿನಿ, ಸಬಿತಾ ಬನ್ನಾಡಿ, ದೀಪ್ತಿ ಹಾಗೂ ವಿದ್ಯಾರ್ಥಿ ಕವಿಗಳು ಕವನ ವಾಚಿಸುವರು.
ಅಹವಾಲು ಸ್ವೀಕಾರ
ಶಿವಮೊಗ್ಗ: ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಅಧಿಕಾರಿಗಳು ಜನವರಿ 22ರಂದು ಬೆಳಗ್ಗೆ 11ರಿಂದ 1 ಗಂಟೆ ವರೆಗೆ ಶಿಕಾರಿಪುರ ತಾಲೂಕಿನ ಹೊಸೂರು ಗ್ರಾಮ ಪಂಚಾಯ್ತಿಯಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳ ಕುರಿತು ಆಗುತ್ತಿರುವ ಅನಗತ್ಯ ವಿಳಂಬ, ಮತ್ತಿತರ ಸಮಸ್ಯೆಗಳಿದ್ದಲ್ಲಿ ನಿಗದಿತ ದಿನಾಂಕ, ಸಮಯ ಮತ್ತು ಸ್ಥಳಗಳಲ್ಲಿ ಖುದ್ದಾಗಿ ಹಾಜರಿದ್ದು, ದೂರುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಶಿವಮೊಗ್ಗ: ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಘಟಕದ ವತಿಯಿಂದ ಪ್ರಸಕ್ತ ಸಾಲಿನ ಎಂ.ಫಿಲ್ ಮತ್ತು ಪಿಎಚ್.ಡಿ. ಸಂಶೋಧನಾ ಶಿಷ್ಯವೇತನಕ್ಕೆ ಪ್ರವರ್ಗ -1, 2ಎ, 2ಬಿ, 3ಎ ಮತ್ತು 3ಬಿ ಗೆ ಸೇರಿದ ಸಂಶೋಧನಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಶ್ವವಿದ್ಯಾನಿಲಯದಲ್ಲಿ ಎಂ.ಫಿಲ್ ಅಥವಾ ಪಿಎಚ್.ಡಿ ನೋಂದಣಿ ಮಾಡಿಸಿರುವ ಅಥವಾ ನೋಂದಣಿ ಶುಲ್ಕ ಪಾವತಿಸಿರುವ, 2.5 ಲಕ್ಷ ವಾರ್ಷಿಕ ಆದಾಯ ಹೊಂದಿರುವ ಪ್ರವರ್ಗ-1ರ ಹಾಗೂ 1 ಲಕ್ಷ ರು. ಆದಾಯ ಹೊಂದಿರುವ 2ಎ, 2ಬಿ, 3ಎ ಮತ್ತು 3ಬಿ ಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 16ರಿಂದ ಸಂಶೋಧನಾರ್ಥಿಗಳು ಅರ್ಜಿಯನ್ನು ತಮ್ಮ ವಿಭಾಗದ ಕಚೇರಿಯಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲಾತಿಗಳನ್ನು ಫೆಬ್ರವರಿ 15ರೊಳಗಾಗಿ ಕುಲಸಚಿವರು, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ ಇಲ್ಲಿಗೆ ಸಲ್ಲಿಸಲು ಕೋರಿದೆ.
ಸರ್ಕಾರಿ ಬಸ್ ಸೇವೆ ಆರಂಭಕ್ಕೆ ಒತ್ತಾಯ
ಕ.ಪ್ರ.ವಾರ್ತೆ, ಭದ್ರಾವತಿ, ಜ.20
ಭದ್ರಾವತಿಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಶೀಘ್ರವಾಗಿ ಓಡಿಸಬೇಕೆಂದು ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಸರ್ಕಾರ ಭದ್ರಾವತಿಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರಾಜ್ಯ ಸಾರಿಗೆ ಬಸ್‌ಗಳ ಸಂಚಾರ ಪ್ರಾರಂಭಿಸಲು 35 ಬಸ್‌ಗಳನ್ನು ಖರೀದಿಸಲು 30 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಭದ್ರಾವತಿಯಿಂದ ಕುವೆಂಪು ವಿವಿಗೆ ಪ್ರತಿನಿತ್ಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರಯಾಣಿಸುತ್ತಾರೆ. ಕಾಗದನಗರ, ಉಜ್ಜಿನೀಪುರ, ರಬ್ಬರ್‌ಕಾಡು, ಹುಡ್ಕೋ ಕಾಲೋನಿ ಮುಂತಾದ ಸ್ಥಳಗಳಿಂದ ಜನರು ಭದ್ರಾವತಿ ಪಟ್ಟಣದ ರಂಗಪ್ಪ ವೃತ್ತ ಮತ್ತು ಹೊಸಮನೆಯ ಶಿವಾಜಿ ವೃತ್ತದವರೆಗೆ ಪ್ರಯಾಣಿಸುತ್ತಾರೆ. ಈಗ ಇವರೆಲ್ಲರೂ ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಾಗಿದೆ. ಈ ಮಾರ್ಗಗಳಲ್ಲಿ ಸರ್ಕಾರಿ ಬಸ್ ಸಂಚಾರ ಶೀಘ್ರದಲ್ಲೇ ಪ್ರಾರಂಭಿಸಿ ವೃದ್ಧರು, ಅಂಗವಿಕಲರು, ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್‌ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.