ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕುವೆಂಪು ಸಾಹಿತ್ಯ ಪದ ವಿವರಣ ಕೋಶ ಸಿದ್ಧ

Mainashree
Updated On : 22 Jan 2014, 12:06 pm

ಕ.ಪ್ರ.ವಾರ್ತೆ  ಶಿವಮೊಗ್ಗ  ಜ.21
ಕನ್ನಡ ಲೇಖಕರೊಬ್ಬರ ಸಮಗ್ರ ಸಾಹಿತ್ಯ ಕುರಿತ ಪದ ವಿವರಣ ಕೋಶಗಳು ಪ್ರಕಟಗೊಳ್ಳುತ್ತಿರುವುದು ಇದೇ ಮೊದಲು. ಇಂತಹ ಅಪರೂಪದ ಕೆಲಸ ಕುವೆಂಪು ಅವರ ಸಾಹಿತ್ಯದ ಮೇಲೆ ನಡೆದಿದ್ದು, ಸದ್ಯವೇ ಬಿಡುಗಡೆಗೊಳ್ಳುತ್ತಿದೆ.
ಈ ಪದ ವಿವರಣಕೋಶಗಳು ಒಟ್ಟು 8 ಸಂಪುಟಗಳಿದ್ದು, ಒಂದೊಂದು ಸಂಪುಟವೂ ಕನಿಷ್ಠ ನಾಲ್ಕು ನೂರರಿಂದ ಐದು ನೂರು ಪುಟಗಳಷ್ಟಿವೆ. ಪ್ರತಿಯೊಂದು ಸಂಪುಟಗಳಲ್ಲಿ ಆಯಾಯ ಪ್ರಕಾರದಲ್ಲಿನ ಭಾಷೆ, ಸಾಹಿತ್ಯ, ಸಂಸ್ಕೃತಿ ಸಂಬಂಧಿಯಾದ ಪದಗಳಿಗೆ ಸಾಮಾನ್ಯ ವಿವರಣೆ, ಪ್ರಯೋಗಗಳನ್ನು, ನಿದರ್ಶನಗಳನ್ನು ನೀಡುವುದರೊಂದಿಗೆ, ಅಗತ್ಯವಿದ್ದಕಡೆ ಛಾಯಾಚಿತ್ರಗಳನ್ನೂ ಅಳವಡಿಸಲಾಗಿದೆ.
ಹಿನ್ನೆಲೆ: ಕೇಂದ್ರ ಸರ್ಕಾರ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ಘೋಷಿಸಿದಾಗ 2008ರ ರಾಜ್ಯೋತ್ಸವದ ಸಮಾರಂಭದಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕನ್ನಡ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದರು.
ಅದರಂತೆ, ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ತಲಾ ಒಂದು ಕೋಟಿ ಅನುದಾನ ಒದಗಿಸಲಾಯಿತು. ಈ ಮಹತ್ವಾಕಾಂಕ್ಷೆಯ ಉದ್ದೇಶಕ್ಕೆ ಅನುಗುಣವಾಗಿ ಕುವೆಂಪು ವಿವಿ ಕನ್ನಡ ಭಾರತಿಯು ಕುವೆಂಪು ಸಾಹಿತ್ಯ ಪದ ವಿವರಣಕೋಶ ಸಿದ್ಧಪಡಿಸುವ ಯೋಜನೆ ಹಾಕಿಕೊಂಡಿತು.
ಸಿ.ಎಸ್. ಶಿವಕುಮಾರ ಸ್ವಾಮಿ (ಕುಮಾರಚಲ್ಯ) ಅವರನ್ನು ಈ ಯೋಜನೆಯ ಸಂಯೋಜಕನನ್ನಾಗಿ ನಿಯೋಜಿಸಲಾಯಿತು. ಬಳಿಕ ಕನ್ನಡ ಭಾರತಿಯ ಪ್ರಾಧ್ಯಾಪಕರ ಸಹಭಾಗಿತ್ವದಲ್ಲಿ ಯೋಜನೆಯ ರೂಪುರೇಷೆ ತಯಾರಿಸಲಾಯಿತು. ಅದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುಮೋದನೆಗೊಂಡಿತು.
ಏಕೆ ಪದವಿವರಣ ಕೋಶ: ಕುವೆಂಪು ಸಾಹಿತ್ಯವನ್ನು ಕುರಿತ ಬಿಡಿ ಬಿಡಿ ಅಧ್ಯಯನಗಳು, ಸಂಶೋಧನೆಗಳು ಸಾಕಷ್ಟು ನಡೆದಿವೆ. ಕೆಲವು ಕಡೆ ಗಂಭೀರವಾದ ಆಲೋಚನೆಗಳಿರುವಂತೆಯೇ, ಮತ್ತೆ ಕೆಲವು ಕಡೆ ಭಾವನಾತ್ಮಕ ಅಭಿಪ್ರಾಯಗಳಷ್ಟೇ ದಾಖಲಾಗಿವೆ. ಜೊತೆಗೆ, ಪದವಿ ನಿಮಿತ್ತವಾದ ಅಭ್ಯಾಸವೂ ನಡೆದಿದೆ. ಈ ಬಗೆಯ ಅಧ್ಯಯನ ಗಮನಿಸಿಯೂ, ಕುವೆಂಪು ಸಾಹಿತ್ಯದ ಒಳವಿನ್ಯಾಸ, ಭಾಷಿಕ ರಚನೆ, ಸಾಂಸ್ಕೃತಿಕ ಪರಿಭಾಷೆಯನ್ನು ಅತ್ಯಂತ ಸೂಕ್ಷ್ಮವಾಗಿ ಪರಿಭಾವಿಸುವ ಅಗತ್ಯವಿದೆ.
ಅವರ ಕೃತಿಗಳಲ್ಲಿ ಪ್ರಾದೇಶಿಕ ಭಾಷೆಯ, ಸಂಸ್ಕೃತಿಯ ಶೋಧ ನಡೆದಿದೆ. ಆ ನಿಟ್ಟಿನಲ್ಲಿ ಕುವೆಂಪು ಬಳಸಿರುವ ಪದಸಂಪತ್ತು, ರೂಪಿಸಿರುವ ನುಡಿಗಟ್ಟುಗಳು, ವರ್ಣಿಸಿರುವ ನಿಸರ್ಗ ಜಗತ್ತು ಇತ್ಯಾದಿ ಸಂಗತಿಗಳನ್ನು ಕುರಿತ ವಿಶೇಷ ಅಧ್ಯಯನ ಆಗಬೇಕಿದೆ. ಅಂತಹ ಪ್ರಯತ್ನಗಳಿಗೆ ಪೂರಕವಾಗಿ ಕುವೆಂಪು ಅವರ ಸಮಗ್ರ ಸಾಹಿತ್ಯ ಸಂಬಂಧವಾದ ಪದ ವಿವರಣಕೋಶಗಳನ್ನು ಸಿದ್ಧಪಡಿಸುವ ಯೋಜನೆಯನ್ನು ಕನ್ನಡ ಭಾರತಿಯು ಹಾಕಿಕೊಂಡು, ಈಗ ಮೊದಲ ಹಂತದ ಕೆಲಸವನ್ನು ಪೂರೈಸಿದೆ.
ಸಮಗ್ರ ಪ್ರಯತ್ನ: ಕುವೆಂಪು ಸಮಗ್ರ ಸಾಹಿತ್ಯವನ್ನು ಒಂದು ಕಡೆ ಕಲೆಹಾಕಿ, ಅದನ್ನು ಕ್ರಮಬದ್ಧವಾಗಿ ಅಭ್ಯಸಿಸುವುದು ಅಷ್ಟು ಸುಲಭವಲ್ಲ. ವಿಭಿನ್ನ ಸಾಹಿತ್ಯ ಪ್ರಕಾರಗಳಲ್ಲಿ ಪ್ರಯೋಗಗೊಂಡ ಪದಗಳನ್ನು ಆಯ್ಕೆಮಾಡಿ, ಅವುಗಳಿಗಿರುವ ಭಾಷಿಕ, ಸಾಂಸ್ಕೃತಿಕ ಅರ್ಥವಲಯವನ್ನು ಹುಡುಕಿ ತೆಗೆಯುವುದೇ ಒಂದು ದೊಡ್ಡ ಸಾಹಸ. ಅಂತಹ ಕೆಲಸವನ್ನು ಕನ್ನಡ ಭಾರತಿಯ ನಾಲ್ಕು ಮಂದಿ ಪ್ರಾಧ್ಯಾಪಕರು ಇದನ್ನು ನಿರ್ವಹಿಸಿದ್ದಾರೆ. ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಪ್ರಕಾರಗಳ ಅನ್ವಯ ವಿಭಜಿಸಿಕೊಂಡು ಈ ಪದ ವಿವರಣ ಕೋಶಗಳನ್ನು ಸಿದ್ಧಪಡಿಸಿದ್ದಾರೆ.
ಪ್ರೊ. ಸಿ.ಎಸ್. ಶಿವಕುಮಾರಸ್ವಾಮಿ, ಪ್ರೊ. ಸಣ್ಣರಾಮ, ಪ್ರೊ. ಕೆ. ಕೇಶವ ಶರ್ಮ, ಡಾ.ಜಿ. ಪ್ರಶಾಂತ ನಾಯಕ ಅವರು ಒಟ್ಟುಗೂಡಿ ಈ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ.
ವಿಶೇಷತೆ: ಇದು ಸಾಮಾನ್ಯ ಶಬ್ದಕೋಶದಂತೆ ಇರದೆ, ಅದು ಸಮಗ್ರ ವಿವರಗಳನ್ನು ಒಳಗೊಂಡ ಪದ ವಿವರಣಕೋಶ (ಔಜ್ಢ್ಝ್ಛ್ಟ್ಜ್ಠಛಝಣ) ಆಗಿರುತ್ತದೆ. ಒಂದು ಪದದ ಅರ್ಥವಿಶೇಷತೆಯನ್ನು, ಅದು ಬಳಕೆಗೊಂಡಿರುವ ಸಾಂಸ್ಕೃತಿಕ ಸಂದರ್ಭದ ವಿವರಗಳನ್ನು ನೀಡುವಲ್ಲಿ ಪುಟದ ಮಿತಿ ಇರುವುದಿಲ್ಲ.
ಏಕೆಂದರೆ ಪದ ಪ್ರಯೋಗದ ಹಿನ್ನೆಲೆಗಳನ್ನು ಗ್ರಹಿಸಿ, ಅದಕ್ಕೆ ಅನುಗುಣವಾಗಿ ಅದರ ವಿವರಣೆ ನೀಡಬೇಕಾಗುತ್ತದೆ. ಅದಕ್ಕಾಗಿ ವ್ಯಾಪಕವಾದ ಪರಾಮರ್ಶೆ ಅಗತ್ಯ. ಆ ನಿಟ್ಟಿನಲ್ಲಿ ಸಂಚಾಲಕರೆಲ್ಲ ಕಾಲಬದ್ಧವಾದ ಅಧ್ಯಯನದಲ್ಲಿ ತೊಡಗಿಕೊಂಡು ಈ ಸಂಪುಟಗಳನ್ನು ಸಿದ್ಧಪಡಿಸಿದ್ದಾರೆ. ಕುವೆಂಪು ಅವರ ಗ್ರಂಥಗಳನ್ನು ಸಮಗ್ರವಾಗಿ ಅವಲೋಕಿಸಿ, ಪದಗಳನ್ನು ಆಯ್ಕೆಮಾಡಿಕೊಂಡು ಸಂದರ್ಭೋಚಿತವಾದ ವಿವರಣೆಯನ್ನು ಕೊಡಲಾಗಿದೆ.  ಪೂರಕವಾಗಿ ಅಪಾರವಾದ ಕ್ಷೇತ್ರಕಾರ್ಯವನ್ನು ನಡೆಸಲಾಗಿದೆ.
ಜನವರಿ 25ರಂದು ವಿಶ್ವವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಯೋಜನೆಯ ನಾಲ್ಕು ಬೃಹತ್ ಸಂಪುಟಗಳನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಬಿಡುಗಡೆ ಮಾಡುವರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರೊ. ಚಂದ್ರಶೇಖರ ಕಂಬಾರ ಸಂಪುಟಗಳನ್ನು ಕುರಿತು ಮಾತನಾಡುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿಶ್ರಾಂತ ಸಮಕುಲಪತಿ ಪ್ರೊ. ಎಸ್. ಚಂದ್ರಶೇಖರ ಭಾಗವಹಿಸುವರು ಎಂದು ಕುಮಾರಚಲ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement