ಗಮಕ, ಅಧ್ಯಾತ್ಮ ಯುವಕರಿಗೂ ಅವಶ್ಯ: ತಿಮ್ಮಪ್ಪ
ಸಾಗರ: ಅಧ್ಯಾತ್ಮ, ಗಮಕ ಮುಂತಾದವು ವೃದ್ಧಾಪ್ಯದಲ್ಲಿರುವವರಿಗೆ ಮಾತ್ರ ಎಂಬುದು ತಪ್ಪು ಗ್ರಹಿಕೆಯಾಗಿದೆ. ಯುವ ಜನಾಂಗಕ್ಕೆ ಈ ಕುರಿತು ಅರಿವು ಮೂಡಿಸಬೇಕು ಎಂದು ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಹೇಳಿದರು.
ಇಲ್ಲಿನ ಶಂಕರಮಠದಲ್ಲಿ ಮಲೆನಾಡು ಗಮಕ ಕಲಾ ಸಂಘ ಹಮ್ಮಿಕೊಂಡಿದ್ದ ಹಗಲಿಡೀ ಗಮಕ ಕಾರ್ಯಕ್ರಮದಲ್ಲಿ ಚಂದನ ವಾಹಿನಿಯ ಗಮಕ ಪ್ರಶಸ್ತಿಗೆ ಭಾಜನರಾದ ಹೊಸಬಾಳೆ ಸೀತಾರಾಮರಾವ್ ಅವರನ್ನು ಗೌರವಿಸಿ ಮಾತನಾಡಿದರು.
ಕಾವ್ಯ, ಮಹಾಕಾವ್ಯ ಓದುವ ಮೂಲಕ ಇಂದಿನ ಬದುಕಿಗೆ ಅಗತ್ಯವಾದ ಅನೇಕ ಸಂಗತಿ ಅರ್ಥ ಮಾಡಿಕೊಳ್ಳಬಹುದು. ಇವತ್ತಿನ ಕಾಲದಲ್ಲಿ ಪುರಾಣ, ಮಹಾ ಕಾವ್ಯ ನಮ್ಮದಾಗಿಸಿಕೊಳ್ಳಬೇಕಾಗಿದೆ ಹೇಳಿದರು.
ಅಭಿನಂದನಾ ನುಡಿಗಳನ್ನಾಡಿದ ಎಂ.ಎಸ್. ತಿಮ್ಮಪ್ಪ, ಸೀತಾರಾಮರಾಯರು ಗಮಕ ಕೇತ್ರದಲ್ಲಿ ತಪಸ್ವಿಯಂತೆ ಸಾಧನೆ ಮಾಡಿದ್ದಾರೆ. ವಾಚನಕಾರರು ಕವಿ ಮನಸ್ಸಿನವರಾಗಿರಬೇಕು. ಕುವೆಂಪು ಅವರ ಮನೆಗೆ ಹೋಗಿ, ಶ್ರೀರಾಮಾಯಣದರ್ಶನಂ ಕಾವ್ಯದ ವಾಚನ ನಿರ್ವಹಿಸಿದ್ದು ಸೀತಾರಾಮರಾಯರ ಹೆಗ್ಗಳಿಕೆ. ವಾಚನದ ಮೂಲಕ ಸಂಸ್ಕಾರ ಜಾಗೃತಿಗೊಳಿಸಲು ಸಾಧ್ಯವಿದೆ ಎಂದು ಹೇಳಿದರು.
ಗೌರವ ಸ್ವಿಕರಿಸಿದ ಹೊಸಬಾಳೆ ಸೀತಾರಾಮರಾವ್ ಮಾತನಾಡಿದರು. ಮಲೆನಾಡು ಗಮಕ ಕಲಾ ಸಂಘದ ಕಾರ್ಯಾಧ್ಯಕ್ಷ ಪ್ರೊ. ಕೆ.ಆರ್. ಕೃಷ್ಣಯ್ಯ ಸ್ವಾಗತಿಸಿದರು. ಪ್ರಭಾವತಿ ವಂದಿಸಿದರು. ಅರುಣ ಬಿ.ಟಿ. ನಿರೂಪಿಸಿದರು.