ಮಾರ್ಚ್ ಮೊದಲ ವಾರ ಜಿಲ್ಲಾ ನುಡಿಜಾತ್ರೆ
ಕ.ಪ್ರ.ವಾರ್ತೆ ಶಿವಮೊಗ್ಗ ಜ.21
ಒಂಬತ್ತನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 8 ಹಾಗೂ 9ರಂದು ನಗರದ ಕುವೆಂಪು ರಂಗಮಂದಿರ ಹಾಗೂ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯಲಿದ್ದು, ಈ ಸಂಬಂಧ ಸಿದ್ಧತಾ ಸಭೆಯು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಕಿಮ್ಮನೆ ರತ್ನಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮ್ಮೇಳನಾಧ್ಯಕ್ಷರ ಆಯ್ಕೆ ಇನ್ನೂ ನಡೆದಿಲ್ಲ. ಇದನ್ನು ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ತೀರ್ಮಾನಿಸಲಿದೆ ಎಂದು ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾಹಿತಿ ನೀಡಿದರು.
ಎಲ್ಲಾ ತಾಲೂಕಿನಲ್ಲೂ ಸಮ್ಮೇಳನ: ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಸಮ್ಮೇಳನ ಯಶಸ್ವಿಗೆ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು. ಜಿಲ್ಲಾ ಸಾಹಿತ್ಯ ಸಮ್ಮೇಳನದ ಜೊತೆಗೆ ಎಲ್ಲಾ ತಾಲೂಕುಗಳಲ್ಲೂ ತಾಲೂಕು ಸಮ್ಮೇಳನ ನಡೆಸಲಾಗುವುದು ಎಂದು ಅಧ್ಯಕ್ಷರು ವಿವರಿಸಿದರು.
ಸಮ್ಮೇಳನದ ಯಶಸ್ವಿಗೆ ವಿವಿಧ ಉಪಸಮಿತಿಗಳನ್ನು ರಚಿಸುವುದು. ಪ್ರತಿನಿಧಿಗಳನ್ನು ನೋಂದಾಯಿಸಿಕೊಳ್ಳುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು. ಸಮ್ಮೇಳನ ಚೆನ್ನಾಗಿ ಸಂಘಟಿಸಿ ಯಶಸ್ವಿಯಾಗಿ ಮಾಡಲು ಜಿಲ್ಲಾ ಆಡಳಿತ ಸಂಪೂರ್ಣ ಸಹಕಾರ ನೀಡುವ ವಿಚಾರವಾಗಿ ಸಚಿವರು ಭರವಸೆ ನೀಡಿದರು.
ಸಭೆಯಲ್ಲಿ ವಿ.ಪ. ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಎಚ್.ಆರ್. ಉಮೇಶ್ ಆರಾಧ್ಯ, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ನಾರಾಯಣರಾವ್, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು, ಹಿರಿಯ ಸಾಹಿತಿ ಇಟಗಿ ಈರಣ್ಣ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅಶೋಕ ಜಿ. ಭಟ್ಟ, ಕಾಂತೇಶ್ ಕದರಮಂಡಲಗಿ, ಡಾ. ಕೆ.ಎನ್. ಗುರುದತ್ತ, ಎಸ್. ದೇವಾನಂದ, ಎಸ್.ಬಿ. ಅಶೋಕ ಕುಮಾರ್, ಜಿ.ಕೆ. ಬಾಲಚಂದ್ರ, ಕೆ. ಶೇಖರಪ್ಪ, ಆರ್. ಜಯಪ್ರಕಾಶ್, ಕೃಷ್ಣಮೂರ್ತಿ ಸಿರ್ಸಿ, ಕಡಿದಾಳು ಗೋಪಾಲ್, ಎಚ್.ಆರ್. ರಾಜಪ್ಪ, ಅತ್ತಿಗದ್ದೆ ಮಂಜುನಾಥ, ಎಚ್.ಬಿ. ಮಲ್ಲಪ್ಪ, ಶಿವಾನಂದ ಶೇಟ್, ಬಿ.ಇ.ಒ. ಹಾಲಾನಾಯ್ಕ, ಬಿ.ಟಿ. ಅಂಬಿಕಾ, ಪ್ರತಿಭಾ ನಾಗರಾಜ್, ಶಾಂತಾ ಆನಂದ, ಲಕ್ಷ್ಮೀ ಮಹೇಶ್, ಸ್ವಾಮಿ. ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಎಸ್.ಆರ್. ಮಂಜುನಾಥ, ಪ್ರಕಾಶ್ ಕಮ್ಮಾರ್, ಎಚ್.ಎಸ್. ಶಂಕರ್, ತಾಪಂ ಇ.ಒ. ಕೆ.ಎಚ್. ಕೃಷ್ಣಮೂರ್ತಿ, ಮಂಜುನಾಥ ಶರ್ಮ, ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಎಂ. ನವೀನ್ ಕುಮಾರ್ ಸ್ವಾಗತಿಸಿದರು. ಕೋಶಾಧ್ಯಕ್ಷ ಯು. ಮಧುಸೂದನ ಐತಾಳ್ ವಂದಿಸಿದರು.