ಸುದ್ದಿ ಸಂಕ್ಷೇಪ
ವರ್ಷದ ಬಳಿಕ ಬಿಜೆಪಿ ಕಚೇರಿಗೆ ಬಂದ ರಾಘವೇಂದ್ರ
ಶಿವಮೊಗ್ಗ: ಬರೋಬ್ಬರಿ ಒಂದು ವರ್ಷದ ತರುವಾಯ ಸಂಸದ ಬಿ.ವೈ. ರಾಘವೇಂದ್ರ ಬಿಜೆಪಿ ಜಿಲ್ಲಾ ಕಚೇರಿ ಪ್ರವೇಶಿಸಿ ವೇದಿಕೆ ಹಂಚಿಕೊಂಡರು. ಮಂಗಳವಾರ ಜಿಲ್ಲಾ ಬಿಜೆಪಿ ಸ್ಲಂ ಮೋರ್ಚಾ ಕಾರ್ಯಕಾರಿಣಿ ಸಭೆ ಆಯೋಜನೆಗೊಂಡಿತ್ತು. ಈ ಸಂದರ್ಭದಲ್ಲಿ ನಗು ನಗುತ್ತ, ಹಸ್ತಲಾಘವ ನೀಡುತ್ತಾ ಕಚೇರಿ ಪ್ರವೇಶಿಸಿದರು. ನಂತರ ಸ್ಲಂ ಮೋರ್ಚಾ ಕಾರ್ಯಕಾರಿಣಿ ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆಯೇರಿದರು. ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲೂ ಪಾಲ್ಗೊಂಡರು. ನಂತರ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರೊಂದಿಗೆ ಹೊರಟರು. ಈ ಸಂದರ್ಭದಲ್ಲಿ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಅನೇಕ ಕಾರಣದಿಂದ ಇಲ್ಲಿಗೆ ಬಂದಿರಲಿಲ್ಲ. ಇದೀಗ ಸಂತಸವಾಗುತ್ತಿದೆ ಎಂದರು. ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಪ್ರತಿಕ್ರಿಯೆ ನೀಡಿ, ವಿವಿಧ ಕಾರಣಗಳಿಂದಾಗಿ ನಮ್ಮ ಮನೆ ಬಿಟ್ಟು ಬೇರೆ ಮನೆಮಾಡಿಕೊಂಡು ಹೋಗಿದ್ದರು. ಈಗ ಮತ್ತೆ ಮೂಲ ಮನೆಗೆ ಬಂದಿದ್ದಾರೆ ಎಂದರು.
ತಾಳಗುಪ್ಪದಲ್ಲಿ
ಎನ್ಎಸ್ಎಸ್ ಶಿಬಿರ
ಸೊರಬ: ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಜ.22ರಂದು ರಾಸೇಯೋ ವಾರ್ಷಿಕ ವಿಶೇಷ ಶಿಬಿರ ಆರಂಭಗೊಳ್ಳಲಿದೆ. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಏರ್ಪಡಿಸಿರುವ ಈ ಶಿಬಿರವನ್ನು ಶಾಸಕ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಕಾಲೇಜು ಪ್ರಾಚಾರ್ಯ ಪ್ರೊ. ಎಂ. ಕೃಷ್ಣಪ್ಪ, ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಸದಸ್ಯೆ ಮಲ್ಲಮ್ಮ ಮಲ್ಲಿಕಾರ್ಜುನ್, ತಾಪಂ ಅಧ್ಯಕ್ಷ ಎಚ್.ಎಂ. ಬಸವಲಿಂಗಪ್ಪ, ಸದಸ್ಯೆ ಲಕ್ಷ್ಮೀ ಜಗದೀಶ್, ಗೆಂಡ್ಲಾ ಗ್ರಾಪಂ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷೆ ಶಿವಮ್ಮ ಕರಿಯಪ್ಪ, ಸದಸ್ಯ ಮಂಜಪ್ಪಗೌಡ ಮೊದಲಾದವರು ಉಪಸ್ಥಿತರಿರುತ್ತಾರೆ ಎಂದು ಶಿಬಿರಾಧಿಕಾರಿಗಳು ತಿಳಿಸಿದ್ದಾರೆ.
ಇಂದು ತಾಲೂಕು ಮಟ್ಟದ ಸ್ಪರ್ಧೆ
ಸೊರಬ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಸಪ್ತಾಹದ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಜ.22ರಂದು ಮಧ್ಯಾಹ್ನ 2.30ಕ್ಕೆ ಇಲ್ಲಿನ ಗುರುಭವನದಲ್ಲಿ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಪ್ರತಿ ಸ್ಪರ್ಧೆಗೆ ವಿದ್ಯಾರ್ಥಿನಿಯರು ಭಾಗವಹಿಸಲು ಅವಕಾಶವಿದೆ. ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.