24ರಂದು ರಕ್ತದಾನ, ವಿಚಾರ ಸಂಕಿರಣ, ಪ್ರತಿಭಾ ಪುರಸ್ಕಾರ
ಸಾಗರ: ಇಲ್ಲಿನ ಮಾತೃಭೂಮಿ ಟ್ರಸ್ಟ್ ವತಿಯಿಂದ ಜ.24ರಂದು ಉಚಿತ ರಕ್ತದಾನ ಶಿಬಿರ, ವಿಚಾರ ಸಂಕಿರಣ, ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ರವಿ ಕುಗ್ವೆ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರಕ್ಕಾಗಿ ಮಡಿದ ವೀರಯೋಧರ ಸ್ಮರಣಾರ್ಥ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರವನ್ನು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಉದ್ಘಾಟಿಸಲಿದ್ದು, ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಪಾಲ್ಗೊಳ್ಳುವರು ಎಂದರು.
ಮಧ್ಯಾಹ್ನ 12.30ಕ್ಕೆ ನಗರಸಭೆ ಆವರಣದ ಗಾಂಧಿಮೈದಾನದಲ್ಲಿ “C ಹೊತ್ತಿನಲ್ಲಿ ಯುವಜನತೆಯ ÑÚÈÛÄßVÚ×Úß’ ವಿಷಯ ಕುರಿತು ನಡೆಯುವ ವಿಚಾರ ಸಂಕಿರಣದಲ್ಲಿ ಕೋಮು ಸೌಹಾರ್ದ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ಉಪನ್ಯಾಸ ನೀಡಲಿದ್ದು, ಕನ್ನಡ ಉಪನ್ಯಾಸಕ ಸಣ್ಣಹನುಮಂತಪ್ಪ ಪ್ರತಿಸ್ಪಂದನೆ ನೀಡಲಿದ್ದಾರೆ.
ಪ್ರಸ್ತುತ ಸಮಾಜದ ಸಮಸ್ಯೆಗಳು ಕುರಿತು ನ್ಯಾಯವಾದಿ ಎಚ್.ಬಿ. ರಾಘವೇಂದ್ರ ಉಪನ್ಯಾಸ ನೀಡಲಿದ್ದು, ಪ್ರಾಧ್ಯಾಪಕ ಡಾ.ಕೆ.ಪ್ರಭಾಕರ್ ರಾವ್ ಪ್ರತಿಸ್ಪಂದನೆ ನೀಡಲಿದ್ದಾರೆ.
ಸಂಜೆ 4ಕ್ಕೆ ನಡೆಯುವ ಸಮಾರೋಪದಲ್ಲಿ ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕೆಳದಿ ರಾಜಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ಸಮಾರೋಪದ ಮಾತುಗಳನ್ನಾಡಲಿದ್ದು ಕಾಗೋಡು ಸತ್ಯಾಗ್ರಹದ ರೂವಾರಿ ಡಾ. ಎಚ್. ಗಣಪತಿಯಪ್ಪ, ಸಾಹಿತಿ ಡಾ. ಡಿಸೋಜ, ಜನಪದ ವಿದ್ವಾಂಸ ಹುಚ್ಚಪ್ಪ ಮಾಸ್ತರ್, ಪುರಸಭೆ ಮಾಜಿ ಅಧ್ಯಕ್ಷ ಅಹ್ಮದಾಲಿಖಾನ್, ನಿವೃತ್ತ ನೌಕರ ವೆಂಕಟರಮಣ ಆಚಾರ್, ಸುನಂದ ಪಂಡಿತ್, ಗೌರಮ್ಮ ಹುಚ್ಚಪ್ಪ ಮಾಸ್ತರ್, ಲಕ್ಷ್ಮಮ್ಮ ಗಡೇಮನೆ, ಸಮಾಜ ಸೇವಕ ಕುಮಾರಗೌಡ, ರಂಗನಿರ್ದೇಶಕಿ ಎಂ.ವಿ. ಪ್ರತಿಭಾ, ನಿವೃತ್ತ ಯೋಧ ಪಿ.ಆರ್. ಸೋಮನ್, ನಾಟಿ ವೈದ್ಯ ಎಂ.ಎಚ್. ರಾಮಪ್ಪ, ಎಸ್.ಸಿ. ಸೈದೂರು, ಶ್ರೀವಲ್ಲಿ ಇವರನ್ನು ಸನ್ಮಾನಿಸಲಾಗುವುದು.
ಕನ್ನಡ ಭಾಷಾ ವಿಷಯದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ರಾಷ್ಟ್ರಮಟ್ಟದ ಯೋಗಾಸನಾ ಸ್ಪರ್ಧೆಯಲ್ಲಿ ವಿಜೇತರಾದ ವನಶ್ರೀ ಶಾಲೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ತಿಳಿಸಿದರು.