ಜಾಗತೀಕರಣ ಕುಶಲಕರ್ಮಿಗಳ ಬಲಿ ಪಡೆಯದಿರಲಿ
ಕ.ಪ್ರ.ವಾರ್ತೆ, ಸಾಗರ, ಜ.22
ಜಾಗತೀಕರಣದ ಒತ್ತಡದಲ್ಲಿ ಗುಡಿ ಕೈಗಾರಿಕೆ, ಗ್ರಾಮೀಣ ಕುಶಲಕರ್ಮಿಗಳಿಗೆ ಅಪಾಯ ತರುವ ಯಾವುದೇ ಯೋಜನೆಯನ್ನು ಸರ್ಕಾರಗಳು ಕೈಗೆತ್ತಿಕೊಂಡರೂ ರಾಜ್ಯ ರೈತ ಸಂಘ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಸರ್ಕಾರದ ನೀತಿ ವಿರುದ್ಧ ಎಲ್ಲ ಹಂತದ ಹೋರಾಟ ಮಾಡಲು ಸಿದ್ಧವಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೊದಲ ಹಂತದ ಜಾಗತೀಕರಣದ ಒತ್ತಡಕ್ಕೆ ಭಾರತೀಯ ಕೃಷಿ, ಬಿತ್ತನೆಬೀಜ, ಕೃಷಿ ವಿಧಾನ ಹಾಗೂ ನಮ್ಮ ಸಾಂಪ್ರದಾಯಿಕ ರೈತರ ಬೌದ್ಧಿಕ ಜ್ಞಾನ ನಾಶವಾಗಿದೆ. ಈಗ ಚರ್ಚೆಯಲ್ಲಿರುವ 2ನೇ ಹಂತದ ಜಾಗತೀಕರಣದಿಂದ ಕುಶಲಕರ್ಮಿಗಳನ್ನು ಬಲಿ ತೆಗೆದುಕೊಳ್ಳುವ ಹುನ್ನಾರ ನಡೆಯುತ್ತಿದೆ. ರೈತ ಸಂಘ ಇದನ್ನು ಸಹಿಸುವುದಿಲ್ಲ ಎಂದರು.
ಪ್ರಸನ್ನ ಪಾದಯಾತ್ರೆಗೆ ಬೆಂಬಲ: ನೇಕಾರರ ಹಿತ ಕಾಪಾಡುವ ನಿಟ್ಟಿನಲ್ಲಿ ರಂಗಕರ್ಮಿ ಪ್ರಸನ್ನ ಅವರು ಗಜೇಂದ್ರಗಡದಿಂದ ಹಮ್ಮಿಕೊಂಡಿರುವ ನೇಕಾರರ ಪಾದಯಾತ್ರೆ ಹಾಗೂ ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಾಡುತ್ತಿರುವ ಒತ್ತಾಯಕ್ಕೆ ರೈತ ಸಂಘ ಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ. ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾಗರ ತಾಲೂಕಿನ ಹೊನ್ನೆಸರದ ಶ್ರಮಜೀವಿ ಆಶ್ರಮದಲ್ಲಿ ನಡೆಯುವ ಉಪವಾಸ ಸತ್ಯಾಗ್ರಹದಲ್ಲಿ ರೈತ ಸಂಘ ಪಾಲ್ಗೊಳ್ಳುತ್ತದೆ. ಈ ಸತ್ಯಾಗ್ರಹಕ್ಕೆ ಎಲ್ಲ ಪ್ರಗತಿಪರ ಚಿಂತಕರು, ಸಂಘಟನೆಗಳು ಬೆಂಬಲ ನೀಡಬೇಕು. ನೇಕಾರರ ಪರವಾಗಿ ಪ್ರಸನ್ನ ಹಮ್ಮಿಕೊಂಡಿರುವ ಎಲ್ಲಾ ಮಾದರಿಯ ಹೋರಾಟಕ್ಕೂ ಸಂಘವು ಬೆಂಬಲ ನೀಡಲಿದೆ ಎಂದು ಹೇಳಿದರು.
ಸರ್ಕಾರದ ಗಮನ ಸೆಳೆಯಬೇಕು: ಭಾರತೀಯ ಗ್ರಾಮೀಣ ಬದುಕಿನ ಆರ್ಥಿಕತೆಯ ಮೂಲಸೆಲೆಯಾದ ಚರಕದ ಬಗ್ಗೆ ಸರ್ಕಾರದ ಉತ್ಪ್ರೇಕ್ಷೆ ಸಲ್ಲದು. ಸರ್ಕಾರ ಪೂರ್ವಾಗ್ರಹಪೀಡಿತವಾಗದೆ ನೇಕಾರನ್ನು ಕರೆದು ಸಮಸ್ಯೆಯ ಕುರಿತು ಚರ್ಚೆ ನಡೆಸಬೇಕು. ವಿಧಾನಸಭೆಯಲ್ಲಿ ರೈತರು, ಗ್ರಾಮೀಣ ಗುಡಿ, ಗೃಹ ಕೈಗಾರಿಕೆ ಹಾಗೂ ನೇಕಾರರ ಪರವಾಗಿ ಇರುವ ಶಾಸಕರು ಈ ವಿಷಯ ಸದನದಲ್ಲಿ ಪ್ರಸ್ತಾಪಿಸಿ, ಸರ್ಕಾರದ ಗಮನವನ್ನು ಸೆಳೆಯುವ ಪ್ರಯತ್ನವನ್ನು ತುರ್ತಾಗಿ ಮಾಡಬೇಕು ಎಂದು ಹೇಳಿದರು.
ಅಧಿವೇಶನದಲ್ಲಿ ನಿರ್ಣಯ ಅವಶ್ಯ: ಸರ್ಕಾರ ವಿದ್ಯುತ್ ಮಗ್ಗಗಳಿಗೆ ಪ್ರೋತ್ಸಾಹ ನೀಡುವ ಧಾವಂತದಲ್ಲಿ ದೇಶಿಯ ಜ್ಞಾನದ ನಾಶಕ್ಕೆ ಮುಂದಾಗಬಾರದು. ದೇಶಿಯ ಜ್ಞಾನವನ್ನು ಸಂರಕ್ಷಿಸುವ ನೀತಿ ನಿಯಮ ಗಂಭೀರವಾಗಿ ಪರಿಗಣಿಸಿ ಸಂರಕ್ಷಿಸುವ ಪ್ರಯತ್ನ ಮಾಡಬೇಕು. ನೇಕಾರರು ಉತ್ಪಾದಿಸಿದ ವಸ್ತುಗಳನ್ನು ಖರೀದಿಸುವುದು, ಅದಕ್ಕೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
ವರದಿ ಪರಿಷ್ಕರಿಸಿ: ಕಸ್ತೂರಿ ರಂಗನ್ ವರದಿ ಮಲೆನಾಡಿನ ವಾಸ್ತವಿಕತೆಗೆ ಸ್ವಲ್ಪ ದೂರವಿದೆ. ಮಲೆನಾಡಿನ ರೈತರು ಹಕ್ಕಲು, ಸೊಪ್ಪಿನಬೆಟ್ಟ, ಬ್ಯಾಣವನ್ನು ತಮ್ಮ ಕೃಷಿಯ ಜೊತೆಗೆ ಅಭಿವೃದ್ಧಿಪಡಿಸಿಕೊಂಡು ಬಂದಿದ್ದಾರೆ. ಕಸ್ತೂರಿ ರಂಗನ್ ವರದಿ ಇವುಗಳನ್ನು ವರದಿಯಲ್ಲಿ ಪರಿಗಣಿಸಿಲ್ಲ. ಮಲೆನಾಡಿನ ಕೃಷಿಯನ್ನು ಸಹ ಪರಿಗಣಿಸಿ, ವರದಿಯನ್ನು ಪರಿಷ್ಕರಿಸಿ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆ ನಡೆಯಬೇಕು ಎಂದು ಹೇಳಿದರು.
ರೈತ ಸಂಘದ ಪ್ರಮುಖರಾದ ಮಹಾಬಲೇಶ್ವರ ಗೌಡ, ಗೋಪಾಲ್, ಶೈಲೇಂದ್ರ ಬಂದಗದ್ದೆ ಹಾಜರಿದ್ದರು.