ಮಾಚೇನಹಳ್ಳಿಯಲ್ಲಿ ಶೀಘ್ರ ಇಎಸ್‌ಐ ಚಿಕಿತ್ಸಾಲಯ
ಶಿವಮೊಗ್ಗ: ಭದ್ರಾವತಿ ಹಾಗೂ ಮಾಚೇನಹಳ್ಳಿಯಲ್ಲಿ ಶೀಘ್ರವೇ ಇಎಸ್‌ಐ ಚಿಕಿತ್ಸಾಲಯಗಳನ್ನು ಆರಂಭಿಸುವ ಭರವಸೆ ಸಿಕ್ಕಿದೆ ಎಂದು ಖಾಸಗಿ ಸಂಸ್ಥೆಗಳ ಹಾಗೂ ಖಾಸಗಿ ನೌಕರರ ಒಕ್ಕೂಟದ ಅಧ್ಯಕ್ಷ ಎಚ್. ನಟರಾಜ್ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಸಚಿವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ನಂತರ ಇಎಸ್‌ಐ ನಿರ್ದೇಶಕರಾದ ರೆಹಮುನ್ನೀಸಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣ ಭದ್ರಾವತಿ ಹಾಗೂ ಮಾಚೇನಹಳ್ಳಿಯಲ್ಲಿ ಇಎಸ್‌ಐ ಕ್ಲಿನಿಕ್ ಆರಂಭಿಸಲು ಅವರು ಸೂಚಿಸಿದ್ದಾರೆ. ನಂತರ ಶಿವಮೊಗ್ಗದಲ್ಲಿ ಎರಡು ಚಿಕಿತ್ಸಾಲಯಗಳು ಆರಂಭವಾಗುವ ನಿರೀಕ್ಷೆ ಇದೆ ಎಂದರು. ಟಿಪ್ರಸ್ತುತ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ತಲಾ ಒಂದು ಚಿಕಿತ್ಸಾಲಯಗಳು ಮಾತ್ರ ಇವೆ. ನಂಜಪ್ಪ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೇ ನಾರಾಯಣ ಹೃದಯಾಲಯ ಮತ್ತು ಸುಬ್ಬಯ್ಯ ಮೆಡಿಕಲ್ ಕಾಲೇಜು ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜತೆಗೆ ಒಂದು ಅಂಬ್ಯುಲೆನ್ಸ್ ಸಹ ದೊರೆಯಲಿದೆ ಎಂದರು. ಇಎಸ್‌ಐ ಸ್ಥಳೀಯ ಕಚೇರಿ 15 ದಿನದಲ್ಲಿ ಭದ್ರಾವತಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು. ಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ರಾಜಾಸಾಬ್, ಕಾರ್ಯದರ್ಶಿ ರಮೇಶ್ ನವುಲೆ ಇದ್ದರು.