ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸುದ್ದಿಸಂಕ್ಷೇಪ

Mainashree
Updated On : 23 Jan 2014, 12:14 pm

ಮುಂದುವರಿದ ದಸಂಸ ಧರಣಿ
ಶಿವಮೊಗ್ಗ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಆರಂಭಿಸಿರುವ ಅನಿರ್ಧಿಷ್ಟ ಅಹೋರಾತ್ರಿ ಧರಣಿಯು ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು. ತಮಟೆ ಭಾರಿಸುವ ಮೂಲಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಧ್ಯಾಹ್ನದ ನಂತರ ಜಿಲ್ಲಾಡಳಿತದ ಅಧಿಕಾರಿಗಳು ದಸಂಸ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದು ಫಲ ನೀಡಲಿಲ್ಲ. ಧರಣಿ ಮುಂದುವರಿಯಲಿದೆ ಎಂದು ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದ್ದಾರೆ. ಸಮಿತಿ ಬೇಡಿಕೆ ಈಡೇರುವ ವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ನಮ್ಮ ಹೋರಾಟಕ್ಕೆ ಹಲವು ಸಂಘಟನೆಗಳು ಕೈಜೋಡಿಸಿವೆ ಎಂದಿದ್ದಾರೆ. ದಸಂಸ ಜಿಲ್ಲಾ ಸಂಚಾಲಕ ಟಿ.ಎಚ್. ಹಾಲೇಶಪ್ಪ, ತಾಲೂಕು ಸಂಚಾಲಕ ರಮೇಶ್ ಚಿಕ್ಕಮರಡಿ, ತಾಲೂಕು ಸಂಘಟನಾ ಸಂಚಾಲಕ ಹನುಮಂತಪ್ಪ ಯಡವಾಲ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಪಂಜಿನ ಮೆರವಣಿಗೆ: ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿತ್ತಿರುವ ದಲಿತ ಸಂಘರ್ಷ ಸಮಿತಿಗೆ ಬೆಂಬಲಿಸಿ ಕರ್ನಾಟಕ ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಬುಧವಾರ ಸಂಜೆ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬೂ ಜಗಜೀವನ್ ರಾಮ್ ಅವರ ಕಂಚಿನ ಪ್ರತಿಮೆ ಸ್ಥಾಪನೆ, ಆಲ್ಕೊಳ ವೃತ್ತಕ್ಕೆ ಪ್ರೊ. ಬಿ. ಕೃಷ್ಣಪ್ಪ ಅವರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ನ್ಯಾ. ಸದಾಶಿವ ಆಯೋಗ ವರದಿ ಜಾರಿ ಮಾಡುವಂತೆಯೂ ಒತ್ತಾಯಿಸಿದರು.
ಸದಾಶಿವ ವರದಿ ಜಾರಿಗೆ ಒತ್ತಾಯ
ಶಿವಮೊಗ್ಗ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಅಖಿಲ ಭಾರತ ಮಾದಿಗ ಮಹಾಸಭಾ ಹಾಗೂ ಜಿಲ್ಲಾ ಛಲವಾದಿ ಮಹಾಸಭಾ ಸಂಯುಕ್ತ ಆಶ್ರಯದಲ್ಲಿ ಜ.27ರಂದು ನಗರದಲ್ಲಿ ಸಂಜೆ ಬೃಹತ್ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ನಗರದ ಬಸ್ ನಿಲ್ದಾಣ ಸಮೀಪದ ಅಶೋಕ ವೃತ್ತದಿಂದ ಬಿ.ಎಚ್. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.
ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಆರ್. ಶಿವಣ್ಣ ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಅಂಬೇಡ್ಕರ್ ಅವರ ಆಶಯದಂತೆ ಅಸ್ಪೃಶ್ಯರಿದ್ದ ಮೀಸಲಾತಿಯನ್ನು ಸ್ಪರ್ಶ್ಯ ಜನಾಂಗದವರು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನು ಸರಿಪಡಿಸಲು ಕೂಡಲೇ ಆಯೋಗದ ಶಿಫಾರಸುಗಳನ್ನು ಅನುಷ್ಠಾನ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಸಾವಕ್ಕನವರ್, ರಾಜ್ಯ ಪ್ರಧಾನ ಕಾರ್ಯದರ್ಶಿ ತಿಮ್ಲಾಪುರ ಲೋಕೇಶ್, :,ಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಶಿವಾನಂದ ಮತ್ತಿತರರು ಇದ್ದರು.
ಸರ್ದಾರ್ ಪಟೇಲ್ ಲೋಹದ ಪ್ರತಿಮೆಗೆ ಲೋಹ ಸಂಗ್ರಹ ಅಭಿಯಾನ
ಸೊರಬ: ಭ್ರಷ್ಟಾಚಾರ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಸರ್ದಾರ್ ವಲ್ಲಭಭಾಯ್  ಪಟೇಲ್ ಲೋಹದ ಪ್ರತಿಮೆಗೆ ಹಣ ಎತ್ತುವ ಬದಲು ಮಣ್ಣು, ಲೋಹವನ್ನು ಸಂಗ್ರಹಿಸಲಾಗುತ್ತಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಬೆನ್ನೂರು ಸಂಗಪ್ಪನಾಯ್ಕ್ ತಿಳಿಸಿದರು.
ಪಟ್ಟಣದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಏಕತಾ ಪ್ರತಿಮೆಗಾಗಿ ಏರ್ಪಡಿಸಿದ್ದ ಮಣ್ಣು ಮತ್ತು ಲೋಹ ಸಂಗ್ರಹ ಅಭಿಯಾನ ಉದ್ದೇಶಿಸಿ ಮಾತನಾಡಿದರು.
ನಾವು ಭಾರತೀಯರು ಎಲ್ಲದರಲ್ಲೂ ಎತ್ತರಕ್ಕಿರಬೇಕು. ನಮ್ಮ ಆಲೋಚನೆ, ಸಂಘಟನೆ, ದೇಶಪ್ರೇಮ, ಚಿಂತನೆ ಎಂದಿಗೂ ಉನ್ನತ ಸ್ತರದಲ್ಲಿರಬೇಕು ಎಂಬ ಉದ್ದೇಶ ಇರಿಸಿ ವಲ್ಲಭಭಾಯ್ ಪಟೇಲ್ ಪ್ರತಿಮೆಯನ್ನು ಪ್ರಪಂಚದಲ್ಲಿನ ಉಳಿದೆಲ್ಲ ಪ್ರತಿಮೆಗಳಿಗಿಂತ ಅತಿ ಹೆಚ್ಚು ಎತ್ತರವಿರುವಂತೆ ನಿರ್ಮಿಸಲಾಗುತ್ತಿದೆ ಎಂದರು.
ಮಾಜಿ ಸಚಿವ ಹಾಲಪ್ಪ ಮಾತನಾಡಿ, ರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳ್ಳುತ್ತಿರುವ ವಲ್ಲಭಭಾಯ್ ಪಟೇಲ್ ಪುತ್ಥಳಿ ಸ್ಥಾಪನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಜಾತಿ, ಮತ, ಪಕ್ಷಭೇದ ಮರೆತು ಕೈಜೋಡಿಸಲು ಜನತೆ ಮುಂದಾಗಬೇಕು ಎಂದು ಕರೆ ನೀಡಿದರು.
ಎಂ.ಆರ್. ಪಾಟೀಲ್, ಎ.ಎಲ್. ಅರವಿಂದ್, ಹುನವಳ್ಳಿ ಗಂಗಾಧರಪ್ಪ, ಗುರುಕುಮಾರ್ ಪಾಟೀಲ್, ವಕೀಲ ಎಂ. ನಾಗಪ್ಪ, ಪಾಣಿ ರಾಜಪ್ಪ, ಸಿ.ನಾಗರಾಜಗೌಡ, ಪರಶುರಾಮ್ ಉಳವಿ, ಎಚ್.ಎಸ್. ಮಂಜಪ್ಪ, ಅಂಗಡಿ ಚಂದ್ರಪ್ಪ, ಶಿವಯೋಗಿ, ಮಹೇಶ್ ಗೌಳಿ ಇನ್ನೂ ಅನೇಕರು ಇದ್ದರು.
ದೆಹಲಿ ಪರೇಡ್‌ಗೆ ಶಿವಮೊಗ್ಗದ ಇಬ್ಬರು
ಶಿವಮೊಗ್ಗ: ದೆಹಲಿಯಲ್ಲಿ ನಡೆಯುತ್ತಿರುವ 65ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಶಿವಮೊಗ್ಗದ ಇಬ್ಬರು ಎನ್‌ಸಿಸಿ ಕೆಡೆಟ್ಸ್‌ಗಳು ಭಾಗವಹಿಸುತ್ತಿದ್ದಾರೆ. ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್‌ಸಿಸಿ ಕೆಡೆಟ್ಸ್‌ಗಳಾದ ಅಕ್ಷಯ ಎಚ್.ಸಿ ಹಾಗೂ ವೈಭವಿ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳಿದ್ದಾರೆ.  ಎನ್‌ಸಿಸಿ ಅಧಿಕಾರಿ ಡಾ.ಮೇಜರ್ ಸಾಂಬಶಿವಂ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ಎನ್‌ಸಿಸಿ ಕೆಡೆಟ್ಸ್ ಅಭಿನಂದೆ ಸಲ್ಲಿಸಿದ್ದಾರೆ. ಇವರಿಬ್ಬರೂ  ಶಿವಮೊಗ್ಗ ಜಿಲ್ಲೆಯ 20 ಕರ್ನಾಟಕ ಬೆಟಾಲಿಯನ್ ಹಾಗೂ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಅನ್ನು ಪ್ರತಿನಿಧಿಸುತ್ತಿದ್ದಾರೆ.
ಜಂಬಿಟ್ಟಿಗೆ ಕ್ವಾರೆ ಮೇಲೆ  ದಾಳಿ
ಸೊರಬ: ತಾಲೂಕಿನ ಗುಡವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜಂಬಿಟ್ಟಿಗೆ ಕ್ವಾರೆಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ವಾಹನಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಬುಧವಾರ ಬೆಳಗ್ಗೆ ಶಿವಮೊಗ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ಶಾಸ್ತ್ರಜ್ಞರಾದ ಬಿಂದನ್ ಪಟೇಲ್ ಅಕ್ರಮವಾಗಿ ನಡೆಯುತ್ತಿದ್ದ ಜಂಬಿಟ್ಟಗೆ ಕ್ವಾರೆಗೆ ದಾಳಿ ನಡೆಸಿ ಅಲ್ಲಿದ್ದ 1 ಜೆಸಿಬಿ ಯಂತ್ರ, 1 ಲಾರಿ, 2 ಟ್ರ್ಯಾಕ್ಟರ್, 1 ಟ್ರಿಪ್ಪರ್, 2 ಬೈಕ್ ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ತುಂಬಿದ ಮಿನಿ ಲಾರಿ ಮತ್ತು ಟ್ರ್ಯಾಕ್ಟರ್‌ಅನ್ನು ಕೂಡ ವಶಕ್ಕೆ ತೆಗೆದುಕೊಂಡಿದ್ದಾರೆ.
ದಾಳಿ ವೇಳೆ ತಹಸೀಲ್ದಾರ್ ಪಿ.ಜಿ. ನಟರಾಜ್, ಪಿಎಸ್‌ಐ ಭೀಮನಗೌಡ ಹಾಗೂ ಸಿಬ್ಬಂದಿ ಇದ್ದರು. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement