ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಸುರಕ್ಷತಾ ನಿಯಮ ಪಾಲಿಸಿ ಅಪಘಾತ ತಪ್ಪಿಸಿ'

Mainashree
Updated On : 23 Jan 2014, 12:15 pm

ಜೋಗ್‌ಫಾಲ್ಸ್: ಪ್ರತಿಯೊಬ್ಬರೂ ವಾಹನ ಚಲಾಯಿಸುವಾಗ ಸುರಕ್ಷತಾ ನಿಯಮ ಪಾಲಿಸುವುದರಿಂದ ಅವಘಡಗಳನ್ನು ತಪ್ಪಿಸಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಜೋಗ್ ಠಾಣೆಯ ಎಎಸ್‌ಐ ಮೀರಾಬಾಯಿ ಹೇಳಿದರು.
ಅವರು ಇಲ್ಲಿನ ಕೆಪಿಸಿ ಪ್ರೌಢಶಾಲೆಯಲ್ಲಿ ನಡೆದ 25ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಅಪಘಾತ ತಪ್ಪಿಸಲು ಸಾಧ್ಯ: ಇಂದು ಯುವಜನರಲ್ಲಿ ವೇಗದಿಂದ ವಾಹನ ಚಾಲನೆಯ ಅಭ್ಯಾಸ ಹೆಚ್ಚಾಗುತ್ತಿದ್ದು, ಇದರಿಂದ ಮುಂದಾಗುವ ಅಪಘಾತ ತಪ್ಪಿಸಲು ಅಸಾಧ್ಯ. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವುದು ಅಪರಾಧ. ಇದರಿಂದ ಸಂಭವಿಸಬಹುದಾದ ಅಪಘಾತಗಳು ಮತ್ತೊಬ್ಬರ ಬಾಳನ್ನು ಕತ್ತಲ ಕೂಪಕ್ಕೆ ತಳ್ಳುವುದು ನಿಶ್ಚಿತ. ನಿಯಮಿತ ವೇಗದಲ್ಲಿ ವಾಹನ ಚಲಾಯಿಸುವುದರಿಂದ ಸುರಕ್ಷಿತವಾಗಿ ಮನೆ ಸೇರಬಹುದು. ಅಲ್ಲದೇ ರಸ್ತೆಯಲ್ಲಿ ಸುರಕ್ಷತಾ ನಿಯಮ ಪಾಲಿಸಲು ಹಾಕಿರುವ ಫಲಕಗಳನ್ನು ನೋಡಿ ಅದನ್ನು ಪಾಲಿಸಲು ಇಂದಿನ ಜನರು ಮುಂದಾಗಬೇಕು ಎಂದು ಅವರು ತಿಳಿಸಿದರು.
ಎಸ್‌ವಿಪಿ ಕಾಲೊನಿಯ ಪ್ರಮುಖ ಬೀದಿಗಳಲ್ಲಿ ಬ್ಯಾನರ್ ಮತ್ತು ನಾಮಫಲಕ ಹಿಡಿದು ಮೆರವಣಿಗೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದರ ಜೊತೆಗೆ ಅದನ್ನು ಪಾಲಿಸುವುದೂ ಅತ್ಯಗತ್ಯ ಎಂದು ಅವರು ತಿಳಿಸಿದರು.
ಕೆಪಿಸಿ ಪ್ರೌಢಶಾಲೆ ದೈಹಿಕ ಶಿಕ್ಷಕಿ ಪವಿತ್ರಾ ನಾಯಕ್, ದೀಪಾ ಹಾಜರಿದ್ದರು. ಸಿಪಿಸಿ ವಿ.ಆರ್. ಗಣೇಶ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement