ಸುದ್ದಿ ಸಂಕ್ಷೇಪ
ಕೇಂದ್ರ ಆಹಾರ ನಿಗಮದ ಸಲಹಾ ಸಮಿತಿ ಸದಸ್ಯರಾಗಿ ನಾಗೇಶ್
ಭದ್ರಾವತಿ: ಭಾರತ ಆಹಾರ ನಿಗಮದ ಸಲಹಾ ಸಮಿತಿ ಸದಸ್ಯರನ್ನಾಗಿ ಭದ್ರಾವತಿಯ ಎನ್.ಟಿ.ಸಿ. ರೈಸ್ ಮಿಲ್ ಮಾಲೀಕ ನಾಗೇಶ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ನಾಗೇಶ್, ತಮ್ಮನ್ನು ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ವಿ. ಥಾಮಸ್ ನಿಗಮದ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿ ಗೋವಾ ರಾಜ್ಯದ ಉಸ್ತುವಾರಿಯನ್ನು ವಹಿಸಿದ್ದಾರೆಂದು ತಿಳಿಸಿದರು. ತಮ್ಮನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲು ಸಹಕರಿಸಿದ ಪ್ರಧಾನಿ ಡಾ. ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಆಹಾರ ಸಚಿವ ಕೆ.ವಿ. ಥಾಮಸ್, ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಡಾ. ಮೋಹನ್‌ರಾವ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನಾಗೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರೈಸ್ ಮಿಲ್ ಮಾಲೀಕ ವರದರಾಜ್, ಎಪಿಎಂಸಿ ಅಧ್ಯಕ್ಷ ಮಣಿಶೇಖರ್, ಬಸವಂತಪ್ಪ, ಬಿ.ಟಿ. ನಾಗರಾಜ್, ಶಿವಕುಮಾರ್, ರಾಮಕೃಷ್ಣ, ರಂಗಪ್ಪ ಇದ್ದರು.
ಪರೀಕ್ಷಾ ಸಿದ್ಧತೆ ಕಾರ್ಯಕ್ರಮ
ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜ. 25ರಂದು ಭದ್ರಾವತಿಯ ಸೇಂಟ್ ಚಾರ್ಲ್ಸ್ ಕನ್ನಡ ಶಾಲೆಯ ಸಭಾಂಗಣದಲ್ಲಿ ಎಸ್ಸೆಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ, ಮಕ್ಕಳ ಮಾತು ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಸ್ಸೆಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಹಾಗೂ ವಿವರಗಳಿಗಾಗಿ ದೂ.ಸಂ. 08282-266384ನ್ನು ಸಂಪರ್ಕಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.
ನೀರಿನ ಕರ ಏರಿಕೆಗೆ ವಿರೋಧ
ತೀರ್ಥಹಳ್ಳಿ: ಪಪಂ ವ್ಯಾಪ್ತಿಯಲ್ಲಿ ನೀರಿನ ತೆರಿಗೆ ವಿಪರೀತವಾಗಿ ಏರಿಸಿದ್ದು, ಇದು ಅವೈಜ್ಞಾನಿಕವಾಗಿದೆ . ಪಪಂ ಆಡಳಿತಾಧಿಕಾರಿಗಳ ಹಿಡಿತದಲ್ಲಿದ್ದು, ಬೇಕಾಬಿಟ್ಟಿ ವ್ಯವಹರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಏಕಾಏಕಿ ಏರಿಸಿರುವ ನೀರಿನ ದರವನ್ನು ಕೂಡಲೇ ಇಳಿಸಿ ಎಂದು ಆಗ್ರಹಿಸಿ ಬಿಜೆಪಿ ಚುನಾಯಿತ ಪಪಂ ಪ್ರತಿನಿಧಿಗಳು ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಎದುರು ಧರಣಿ ಕುಳಿತು, ಕ್ಷೇತ್ರದ ಶಾಸಕರು ಪಟ್ಟಣದ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ. ರಸ್ತೆ ಅಗಲೀಕರಣಕ್ಕೆ ಪಟ್ಟಣದ ವ್ಯಾಪಾರಸ್ಥರು ಸಹಕರಿಸಿ ವರ್ಷಗಳೇ ಉರುಳಿದೆ. ಇದರ ಪರಿಹಾರವಾಗಿ ಇನ್ನೂ ರು. 7 ಕೋಟಿ ಬಿಡುಗಡೆಮಾಡಿಲ್ಲ. ರಸ್ತೆ ಅಭಿವೃದ್ಧಿಗೆ ರು. 15 ಕೋಟಿ ಬಿಡುಗಡೆಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಕೆಲಸ ಆಗಿಲ್ಲ ಎಂದು ಆಪಾದಿಸಿದರು.
3 ಪಟ್ಟು ಹೆಚ್ಚಳ: ಹಿಂದೆ ನೀರಿನ ತೆರಿಗೆ ದರ ಕಡಿಮೆ ಪ್ರಮಾಣದಲ್ಲಿತ್ತು. ಈಗ ಏಕಾಏಕಿ 3 ಪಟ್ಟು ಹೆಚ್ಚು ಮಾಡಲಾಗಿದ್ದು, ಬಳಕೆದಾರರಿಗೆ ಅಧಿಕ ಹೊರೆಯಾಗುತ್ತಿದೆ ಎಂದು ಹೇಳಿದರು. ಕೂಡಲೇ ನೀರಿದ ದರ ಇಳಿಸಬೇಕು ಎಂದು ಒತ್ತಾಯಿಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಪಪಂ ಚುನಾಯಿತ ಸದಸ್ಯ ಸಂದೇಶ ಜವಳಿ, ವೆಂಕಟೇಶ ಪಟವರ್ಧನ್, ನವೀನ್, ಪಿ.ಸಿ. ಸತೀಶ ಶೆಟ್ಟಿ, ರಾಜೀವನ್, ಲಕ್ಷ್ಮಿವೆಂಕಟಪ್ಪ, ವಿನೋದ ಶೆಟ್ಟಿ, ಲಕ್ಷ್ಮಿ ರಾಜಪ್ಪ, ಮಂಜುನಾಥ ಶೆಟ್ಟಿ, ಸೊಪ್ಪುಗುಡ್ಡೆ ರಾಘವೇಂದ್ರ, ನಾಗರಾಜಶೆಟ್ಟಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸನ್ಮಾನ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ ಇವರು ಜ. 27ರಂದು ಮಧ್ಯಾಹ್ನ 3.30ಕ್ಕೆ ಪ್ರೊ. ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದೆ. ಪ್ರೊ. ಚಂದ್ರಶೇಖರ ಕಂಬಾರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕುಲಪತಿ ಪ್ರೊ. ಎ.ಎಸ್.ಎ. ಬಾರಿ ಅಧ್ಯಕ್ಷತೆ ವಹಿಸುವರು. ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶ್ರೀಕಂಠ ಕೊಡಿಗೆ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಮಲ್ಲಿಕಾ ಘಂಟಿಯವರನ್ನು ಸನ್ಮಾನಿಸಲಾಗುವುದು. ಕನ್ನಡ ಭಾರತಿ ಪ್ರಾಧ್ಯಾಪಕ ಪ್ರೊ. ಸಿ.ಎಸ್. ಶಿವಕುಮಾರಸ್ವಾಮಿ (ಕುಮಾರಚಲ್ಯ) ಉಪಸ್ಥಿತರಿರುವರು.
ಜಿಎಸ್ಸೆಸ್ ಕವನಗಳು ಬದುಕಿಗೆ ಹತ್ತಿರ: ಶ್ರೀರಂಜಿನಿ
ಶಿವಮೊಗ್ಗ: ಸುಮಾರು ಐದೂವರೆ ದಶಕಗಳ ಕಾಲ ನಿರಂತರವಾಗಿ ಕಾವ್ಯ ಸೃಷ್ಟಿ ಮಾಡಿದ ಕವಿ, ಅತ್ಯತ್ತಮ ಬರಹಗಾರ, ವಿಮರ್ಶಕ, ವಿಶ್ಲೇಷಕ, ನವೋದಯ, ನವ್ಯ ಎರಡರಲ್ಲೂ ಕಾವ್ಯವನ್ನು ರಚನೆ ಮಾಡಿದ್ದಂಹ ಕವಿ ಅಪರೂಪದ ಕವಿ ಜಿ.ಎಸ್. ಶಿವರುದ್ರಪ್ಪನವರು ನಮ್ಮಿಂದ ಮರೆಯಾಗಿ ಇಂದಿಗೆ ಒಂದು ಮಾಸವಾಗುತ್ತಿದೆ.
ಈ ದಿಸೆಯಲ್ಲಿ ಎದೆ ತುಂಬಿ ಹಾಡಿದ ಕವಿಗೊಂದು ಭಾವ ನಮನ ಸಲ್ಲಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಿಲ್ಲಾಭಿವೃದ್ಧಿ ಸಮಿತಿ ಸದಸ್ಯೆ, ಹಿಂದೂ ಸೇವಾ ಪ್ರತಿಷ್ಠಾನದ ನಗರ ಸಂಚಾಲಕರಾದ ಶ್ರೀರಂಜಿನಿ ದತ್ತಾತ್ರಿ ಹೇಳಿದರು.
ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗ ಹಾಗೂ ವಿನೋಬ ವಿದ್ಯಾ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 'ಎದೆ ತುಂಬಿ ಹಾಡಿದ ಕವಿ ಜಿ.ಎಸ್. ಶಿವರುದ್ರಪ್ಪನವರಿಗೊಂದು ಭಾವ ನಮನ' ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷೆ ಶೈಲಜಾ ಮಹೇಶ್ವರಪ್ಪ ಮಾತನಾಡಿದರು. ನಂತರ ಶಾಲಾ ಮಕ್ಕಳಿಂದ ಜಿ.ಎಸ್. ಶಿವರುದ್ರಪ್ಪ ವಿರಚಿತ ಕವನ ಹಾಡಿದರು. ಕಾರ್ಯಕ್ರಮ ಪ್ರಾಯೋಜಕ ಲೋಕೇಶ್ ಮತ್ತು ವೀಣಾ ದಂಪತಿಗಳು ಬಹುಮಾನ ವಿತರಿಸಿದರು.
ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಜಾ ಮಹೇಶ್ವರಪ್ಪ, ಹಾಗೂ ವಿನೋಬ ವಿದ್ಯಾ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷೆ ಜಯಾ ಸುರೇಶ್, ಫ್ರೆಂಡ್ಸ್ ಸೆಂಟರ್ ಉಪಾಧ್ಯಕ್ಷ ಮಹೇಶ್ವರಪ್ಪ, ಗಿರೀಶ್, ಜಯಶ್ರೀ ಗಿರೀಶ್, ಶ್ರೀನಿಧಿ ವೆಂಕಟೇಶ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.