ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

25000 ಗೌರವಧನ ನೀಡಲು ಆಗ್ರಹ

Vishwanath S
Updated On : 25 Jan 2014, 12:53 pm

ಸೊರಬ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಶುಕ್ರವಾರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಸುಮಾರು 11 ಸಾವಿರ ಅತಿಥಿ ಉಪನ್ಯಾಸಕರಿದ್ದು, 6 ರಿಂದ 9 ವರ್ಷದವರೆಗೆ ಅತ್ಯಂತ ಕಡಿಮೆ ಗೌರವಧನದಲ್ಲಿ ಅತಿಥಿ ಉಪನ್ಯಾಸಕ ವೃತ್ತಿಯನ್ನು ಮಾಡಿಕೊಂಡು ಬಂದಿದ್ದೇವೆ. ಈಗಾಗಲೇ ಸೇವೆ ಸಲ್ಲಿಸುತ್ತಿರುವ ಅನೇಕ ಉಪನ್ಯಾಸಕರು ವಿವಾಹಿತರಾಗಿದ್ದು, ವಯೋವುತಿ ಸಹಾ ಮೀರುತ್ತಿದೆ. ಸರ್ಕಾರದಿಂದ ಜೀವನ ಭದ್ರತೆ ಇಲ್ಲದೇ ಇರುವುದರಿಂದ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡುವಂತಾಗಿದೆ. ಆದ್ದರಿಂದ ಹಾಲಿ ಸೇವೆ ಸಲ್ಲಿಸುತ್ತಿರುವವರಿಗೆ ಸರ್ಕಾರದಿಂದ ಜೀವನ ಭದ್ರತೆಗಾಗಿ ಮತ್ತು ರಕ್ಷಣೆಗಾಗಿ ಯೋಜನೆಗಳನ್ನು ಜಾರಿ ಮಾಡಬೇಕು. ಗೌರವಧನ ಪ್ರತಿ ತಿಂಗಳು ನೀಡಬೇಕು ಎಂದು ಮನವಿ ಮಾಡಿದರು.
ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಅತಿಥಿ ಉಪನ್ಯಾಸಕರಿಗೆ 25000 ಗೌರವಧನ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ಕೇವಲ 8000 ಮಾತ್ರ ನೀಡುತ್ತಿದೆ. ಒಬ್ಬ ಕೂಲಿ ಕಾರ್ಮಿಕನಿಗಿಂತಲೂ ಕನಿಷ್ಠ ವೇತನ ತಮ್ಮದ್ದಾಗಿದೆ. ಇದರಿಂದ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಆದ್ದರಿಂದ ನಮ್ಮ ಮನವಿಗೆ ಸ್ಪಂದಿಸಿ ಗೌರವಧನ ಯುಜಿಸಿ ಮಾರ್ಗದರ್ಶನದಂತೆ ಪ್ರತಿ ಉಪನ್ಯಾಸಕನಿಗೂ ಮಾಸಿಕವಾಗಿ 25000 ವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೀಡಬೇಕು. ಹಾಲಿ ಇರುವ ಅತಿಥಿ ಉಪನ್ಯಾಸಕರನ್ನು ಮುಂದಿನ ವರ್ಷಕ್ಕೆ ಕರ್ತವ್ಯಕ್ಕೆ ನೇಮಕ ಮಾಡಿಕೊಳ್ಳುವಾಗ ಪುನಃ ಸಂದರ್ಶನ ಮಾಡದೇ ಕಾರ್ಯನಿರ್ವಹಿಸುತ್ತಿರುವ  ಕಾಲೇಜುಗಳಲ್ಲಿ ಮುಂದುವರಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ ಸದರಿ ಕಾಲೇಜುಗಳಿಗೆ ಉಪನ್ಯಾಸಕರನ್ನು ಕಾಯಂ ಮಾಡಿಕೊಳ್ಳಬೇಕು.  ವಯೋವುತಿ ಮೀರುತ್ತಿರುವವರಿಗೆ ಮೊದಲ ಆದ್ಯತೆ ನೀಡಬೇಕು. ಸಂವಿಧಾನದ ಅನುಚ್ಛೇಧ 309ರ ಪ್ರಕಾರ ಸರ್ಕಾರಿ ಪದವಿ ಕಾಲೇಜುಗಳ ಉಪನ್ಯಾಸಕರ ಈಗಿರುವ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಟಿ.ರಾಘವೇಂದ್ರ, ಖಜಾಂಚಿ ಎಸ್.ಜಿ. ಚೇತನಕುಮಾರಿ, ಉಪನ್ಯಾಸಕರಾದ ಕೆ.ಆರ್. ಚಂದ್ರಪ್ಪ, ಎಂ.ಡಿ. ವೀರೇಂದ್ರ, ಎಚ್.ಡಿ. ವಿದ್ಯಾಶ್ರೀ, ಸ್ಮಿತಾ, ಕೆ.ಎಸ್. ಶೃತಿ, ಎಸ್. ರಮ್ಯಾ, ಎಸ್. ಕಾವ್ಯಾಶ್ರೀ, ವಸಂತ್, ಶಿವಕುಮಾರ್, ಪ್ರವೀಣ್, ನಾರಾಯಣ, ವಿಘ್ನೇಶ್, ಸಿದ್ದಪ್ಪ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement