ಇಂದಿನಿಂದ 'ಶಿವಾರ್ಪಣ'
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.24
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನ ನೀಡುವ ಕಲಾವಿದರ ಪರಿಚಯ, ಕಲಾಪ್ರದರ್ಶನ ಗ್ರಾಮಾಂತರ ಪ್ರದೇಶಗಳಲ್ಲಿಯೂ ನಡೆಯಬೇಕೆಂಬ ದಿಸೆಯಲ್ಲಿ ಕಲಾತೀರ ಸಂಸ್ಥೆ ತಿಂಗಳಿಗೊಮ್ಮೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 'ಶಿವಾರ್ಪಣ' ಕಾರ್ಯಕ್ರಮ ಆಯೋಜಿಸಿದ್ದು, ಮೊದಲ ಕಾರ್ಯಕ್ರಮ ಜ.25ರಿಂದ 2 ದಿನ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಕುಂಬಳೆಯಲ್ಲಿ ನಡೆಯಲಿದೆ.
ನಗರದಲ್ಲಿ ಶುಕ್ರವಾರ ಕಲಾತೀರ ಸಂಸ್ಥೆಯ ಉದಯಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಈ ಬಾರಿಯಿಂದ 'ಶಿವಾರ್ಪಣ'ವನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸುವ ನಿರ್ಧಾರ ಕೈಗೊಂಡಿದ್ದು, ಮುಖ್ಯವಾಗಿ ರಾಜ್ಯದ ಗ್ರಾಮೀಣ ಹಾಗೂ ಹಿಂದುಳಿದ ಭಾಗಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ನೃತ್ಯಕಲೆ ಹಾಗೂ ಜಾನಪದ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮ ಸಂಘಟನೆ: ಕುಂಬಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲೆಯ ಸುವರ್ಣ ಮಹೋತ್ಸವ ಸಮಿತಿಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ ಎಂದ ಅವರು, ಮುಂದಿನ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಾರ್ಯಕ್ರಮವನ್ನು ಕ್ರಮವಾಗಿ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಿಸಿದರು.
ಪ್ರತಿ ತಿಂಗಳೂ ನಗರ ಮತ್ತು ಪಟ್ಟಣಗಳಲ್ಲದೇ ಹೋಬಳಿ ಮತ್ತು ಗ್ರಾಪಂ ಹಂತದಲ್ಲಿಯೂ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. ಸಂಗೀತ, ನೃತ್ಯ ಪ್ರದರ್ಶನಗಳ ಜೊತೆಗೆ ಇವುಗಳ ಕುರಿತಾದ ವಿಚಾರ ಸಂಕಿರಣ ಮತ್ತು ಪ್ರಾತ್ಯಕ್ಷಿಕೆಯನ್ನು ಸ್ಥಳೀಯ ಶಾಲಾ ಕಾಲೇಜುಗಳಲ್ಲಿ ನಡೆಸಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮ: ಶಿವಾರ್ಪಣ ಕಾರ್ಯಕ್ರಮವನ್ನು ಜ. 25ರಂದು ಮಧ್ಯಾಹ್ನ 2ಕ್ಕೆ ಉದಯಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ನಂತರ ಶಾಲಾ ಮಕ್ಕಳಿಂದ ವರ್ಣರಂಜಿತ ವೇಷ ಭೂಷಣಗಳ ಸಾಂಸ್ಕೃತಿಕ ದಿಬ್ಬಣ, ಸಂಜೆ 4ಕ್ಕೆ ಭೃಗು ಶಾಪ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯುವುದು.ಕಲಾವಿದ ಕೊಳಗಿ ಕೇಶವ ಹೆಗಡೆ ಸೇರಿದಂತೆ ಹಲವರು ಪಾಲ್ಗೊಳ್ಳುವರು.
ಸಂಜೆ 7ಕ್ಕೆ ಸಾಗರದ ಜಾನಪದ ಕಣಜ ವತಿಯಿಂದ ಸಂಗ್ಯಾ ಬಾಳ್ಯ ನಾಟಕ, ರಾತ್ರಿ 9ಕ್ಕೆ ಕೊಪ್ಪದ ಮಯೂರಿ ನಾಟ್ಯ ಕಲಾ ತಂಡದಿಂದ ಭರತ ನಾಟ್ಯ ಹಾಗೂ ರಾತ್ರಿ 10ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಯಕ್ಷಗಾನ ಪ್ರದರ್ಶನವಿದೆ.
ತಾಳಮದ್ದಲೆ: 26ರಂದು ಮಧ್ಯಾಹ್ನ 12ಕ್ಕೆ ಮಹಿಳಾ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವಿದ್ದು, ನಂತರ ಹಿರಿಯ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಭಟ್ ಗುಡ್ಡೇಹಿತ್ಲು ಅವರನ್ನು ಸನ್ಮಾನಿಸಲಾಗುತ್ತಿದೆ. ಸಂಜೆ 7ಕ್ಕೆ ಕೊಪ್ಪದ ನಾಗರತ್ನ ನಟರಾಜ್ ಮತ್ತು ತಂಡದಿಂದ ಸುಗಮ ಸಂಗೀತ, ನಂತರ ಬೆಂಗಳೂರಿನ ನಾಗರಾಜ್ ಮತ್ತು ಶಮ್ಯಾ ತಂಡದಿಂದ ಯುಗಳ ಭರತ ನಾಟ್ಯ, ಬೆಂಗಳೂರಿನ ಅನುಪಮ ವರ್ಮ, ಸುಚೇತ ರಘುರಾಮುರಿಂದ ಕೂಚುಪ್ಪಡಿ ನೃತ್ಯ, ನಂತರ ಕಲಾತೀರದ ಸೌಮ್ಯ ಉದಯ್ ಕುಮಾರೆ ಶೆಟ್ಟಿ, ಪೃಥೆ ಹವಾಲ್ದಾರ್, ಸಹನಾ ಮಯ್ಯ ತಂಡದಿಂದ ಒಡಿಸ್ಸಿ ನೃತ್ಯ ಪ್ರದರ್ಶನವಿದೆ. ರಾತ್ರಿ 9ಕ್ಕೆ ಲವಕುಶ ಯಕ್ಷಗಾನ ಬಯಲಾಟವಿದ್ದು ಹೆಸರಾಂತ ಕಲಾವಿದರಾದ ಸುಬ್ರಹ್ಮಣ್ಯ ಧಾರೇಶ್ವರ, ಶಂಕರ ಭಾಗವತ್, ಗಣೇಶ್ ಗಾಂವ್ಕರ್, ಬಳ್ಳೂರು ಸೋಮಯಾಜಿ, ಸ್ರುಬ್ರಹ್ಮಣ್ಯ ಭಟ್ ಗುಡ್ಡೆ ಹಿತ್ತಲು, ಸದಾನಂದ ಶರ್ಮ, ನಾಗಶ್ರೀ, ರಾಧಿಕಾ ಪಾಲ್ಗೊಳ್ಳಲಿದ್ದಾರೆ.