ಪಶು ಆಸ್ಪತ್ರೆಗೆ ವೈದ್ಯರೇ ಇಲ್ಲ
ಕ.ಪ್ರ. ವಾರ್ತೆ, ಹೊಸನಗರ, ಜ.24
30 ಸಾವಿರ ಕೊಟ್ಟು ತಂದ ಎಚ್ಎಫ್ ತಳಿಯ ಹಸು ಗರ್ಭ ಧರಿಸಿ 7 ತಿಂಗಳಲಾಗಿತ್ತು. ಒಂದು ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಕುತ್ತಿಗೆ ಭಾಗದಲ್ಲಿ ನೋವು ಕಾಣಿಸಿಕೊಂಡು ಒದ್ದಾಡಲು ಪ್ರಾರಂಭಿಸಿತ್ತು. ವೈದ್ಯರನ್ನು ಕರೆತರಲು ಪಶು ಆಸ್ಪತ್ರೆಗೆ ಹೋದರೆ ಅಲ್ಲಿ ವೈದ್ಯರೇ ಇಲ್ಲ.
ಏನು ಮಾಡಲು ತೋಚದೆ ನಮಗೆ ಗೊತ್ತಿದ್ದ ಗಿಡಮೂಲಿಕೆ ಔಷಧಿ ನೀಡುವ ಪ್ರಯತ್ನ ಮಾಡಿದರೂ ಹಸುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ನೋಡನೋಡುತ್ತಲೆ ಪ್ರೀತಿಯಿಂದ ಸಾಕಿದ ಹಸು ಮೃತಪಟ್ಟ ನೋವು ಒಂದಡೆಯಾದರೆ ಸಾಲ- ಸೋಲ ಮಾಡಿ 30 ಸಾವಿರ ವ್ಯಯಿಸಿ ಹಸು ಖರೀದಿಸಿದ್ದೆ. ನನ್ನ ಗ್ರಹಾಚಾರಕ್ಕೆ ಹಸುವಿಗೆ ವಿಮೆ ಮಾಡಿಸಿರಲಿಲ್ಲ ಎಂದು ನೋವು ತೋಡಿಕೊಳ್ಳುತ್ತಿದ್ದ ಅಪ್ಪಣ್ಣಶೆಟ್ಟಿ ಅವರಲ್ಲಿ ಪಶು ಆಸ್ಪತ್ರೆಯ ಬಗ್ಗೆ ಆಕ್ರೋಶ ಎದ್ದು ಕಾಣುತ್ತಿತ್ತು.
ಆತಂಕ: ಇದು ನಗರ ಹೋಬಳಿ ಕೇಂದ್ರ ನಗರ ಪಶು ಆಸ್ಪತ್ರೆಯ ದುಸ್ಥಿತಿ. ಆಸ್ಪತ್ರೆ ಕಟ್ಟಡ ಕೂಡ ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತೆ ಕಂಡು ಬರುತ್ತಿದೆ. ಇದ್ದ ಒಬ್ಬ ಕಾಂಪೌಂಡರ್ಗೆ ಪಶು ಆರೈಕೆ, ಚಿಕಿತ್ಸೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇದರಿಂದ ಹೈನುಗಾರಿಕೆ ಮಾಡುವವರು, ರೈತಾಪಿ ಕುಟುಂಬಗಳು ಆತಂಕಕ್ಕೀಡಾಗಿವೆ.
ಗಮನಹರಿಸುತ್ತಿಲ್ಲ: ಪಶು ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಬಗ್ಗೆ ಮತ್ತು ಜಾನುವಾರುಗಳಿಗೆ ಸರಿಯಾದ ಚಿಕಿತ್ಸೆ ಸಿಗದಿರುವ ಕಾರಣ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಗಮನಹರಿಸುತ್ತಿಲ್ಲ. ಹೀಗಾದರೆ ಜಾನುವಾರುಗಳ ಸ್ಥಿತಿ ಏನು, ಬಡರೈತರ ಪಾಡೇನು ಎಂದು ಸಾರ್ವಜನಿಕರು ಆಕ್ರೋಶ ತೋಡಿಕೊಳ್ಳುತ್ತಾರೆ.
ವಾರದ ಹಿಂದೆ ಸಮೀಪದ ಚಿಕ್ಕಪೇಟೆ ನಿವಾಸಿ ಅಪ್ಪಣ್ಣ ಶೆಟ್ಟಿಯವರ ಹಸು ಮೃತಪಟ್ಟಿರುವ ಘಟನೆ ಒಂದು ಉದಾಹರಣೆ ಅಷ್ಟೆ. ಬೆಳಕಿಗೆ ಬಾರದೆ, ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ತೆತ್ತ ಜಾನುವಾರುಗಳ ಸಂಖ್ಯೆಗೇನು ಇಲ್ಲಿ ಕೊರತೆಯಿಲ್ಲ.
ಹೈನುಗಾರಿಕೆ ಕುಟುಂಬ: ಹೇಳಿ ಕೇಳಿ ನಗರ ಹೋಬಳಿ ಮುಳುಗಡೆ ತವರು. ಬೇರೆ ಯಾವ ವ್ಯಾಪಾರ ಇಲ್ಲಿ ಅಷ್ಟು ಸಲೀಸು ಕುದುರುವುದಿಲ್ಲ. ಹೀಗಿರುವಾಗ ಸಾಕಷ್ಟು ಕುಟುಂಬಗಳು ಹೈನುಗಾರಿಕೆಯನ್ನೆ ತಮ್ಮ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಸರ್ಕಾರ ಹೈನುಗಾರಿಕೆಗೆ ಒತ್ತು ನೀಡಲಾಗುತ್ತದೆ ಎಂದು ಎಲ್ಲಾ ಸರ್ಕಾರಗಳು ಭರವಸೆ ನೀಡುತ್ತಲೆ ಬಂದಿವೆ. ಆದರೆ, ಆಸ್ಪತ್ರೆಗೆ ವೈದ್ಯರಿಲ್ಲದೆ ವರ್ಷ ಕಳೆದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದರೆ ಗ್ರಾಮೀಣ ಪ್ರದೇಶ ರೈತ ಕುಟುಂಬಗಳ ಪಾಡೇನು ಎಂದು ಗ್ರಾಮಸ್ಥರು ಪ್ರಶ್ನಿಸುವಂತಾಗಿದೆ.
ಇನ್ನಾದರೂ ಗಮನ ಹರಿಸಲಿ: ಸೂಕ್ತ ವೈದ್ಯರು ಮತ್ತು ನಿರ್ವಹಣೆ ಇಲ್ಲದ ಪಶು ಆಸ್ಪತ್ರೆಗಳ ಸಂಖ್ಯೆ ಸಾಕಷ್ಟಿದ್ದು, ಕೂಡಲೇ ವೈದ್ಯರನ್ನು ನೇಮಕ ಮಾಡುವುದು. ಸೂಕ್ತ ಔಷಧಿ ಒದಗಿಸುವುದು ಮತ್ತು ಬಡ ರೈತ, ಹೈನುಗಾರಿಕೆ ಕುಟುಂಬಗಳ ಹಿತರಕ್ಷಣೆ ಮಾಡುವ ಕೆಲಸ ತುರ್ತಾಗಿ ಆಗಬೇಕಿದ್ದು, ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿ ಎಂದು ್ಡಟಿಛ್ಜಿ ರೈತರು ಒತ್ತಾಯಿಸಿದ್ದಾರೆ.
-ರವಿ ಬಿದನೂರು