ಕೆಜೆಪಿ ಕಟ್ಟಿದ್ದು ಕೆಟ್ಟ ಕನಸು
ಕ.ಪ್ರ. ವಾರ್ತೆ, ಶಿವಮೊಗ್ಗ, ಜ.25
ಕೆಜೆಪಿಯೊಂದು ಕೆಟ್ಟ ಕನಸು ಎಂದು ಮರೆತುಬಿಡಿ. ಈ ಹಿಂದೆ ಬಿಜೆಪಿಯಲ್ಲಿದ್ದಂತೆ ಚೌಕಟ್ಟಿಗೆ ಬದ್ಧರಾಗಿ ಕೆಲಸ ÈÚáÛt’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಸೇರ್ಪಡೆಯಾದ ಕೆಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ನಗರದಲ್ಲಿ ಶನಿವಾರ ಕೆಜೆಪಿ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವ ಭಾವನೆಯನ್ನೂ ಇಟ್ಟುಕೊಳ್ಳದೇ ಬಿಜೆಪಿ ಚೌಕಟ್ಟಿನಲ್ಲಿ ಯಾವ ರೀತಿ ಕೆಲಸ ಮಾಡುದ್ದೆವೋ ಅದೇ ರೀತಿ ಕೆಲಸ ಮಾಡಿ. ಜನರು ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದು ನೆನಪಿನಲ್ಲಿ ಇರಲಿ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಕೇಂದ್ರದಲ್ಲಿ ಸಚಿವನಾಗುವ ಆಸೆ ನನಗಿಲ್ಲ ಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ಯಡಿಯೂರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಮೋದಿ ಅವರ ಸಂಪುಟದಲ್ಲಿ ಸಚಿವರಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೇ ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿದ್ದರು. ಅವತ್ತೇ ನಾನು ಹೋಗಲಿಲ್ಲ. ಜನರು, ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ ಬಿಜೆಪಿ ಸೇರಿದ್ದೇನೆ. ನನಗೆ ಯಾವುದೇ ಸ್ಥಾನ, ಅಧಿಕಾರವೂ ಬೇಡವೆಂದರು.
ಮುಂಬರುವ ಚುನಾವಣೆಯಲ್ಲಿ ರಾಜ್ಯದಿಂದ 20ಕ್ಕೂ ಹೆಚ್ಚು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಮೋದಿಯನ್ನು ಪ್ರಧಾನಿಯನ್ನಾಗಿ ಮಾಡುವುದೇ ನಮ್ಮ ಗುರಿ ಎಂದರು.
ತರಕಾರಿ ಮಾರುತ್ತಿದ್ದೆ: ಯಡಿಯೂರಪ್ಪ
ನಾನು ಮಂಡ್ಯದಲ್ಲಿ ತರಕಾರಿ ಮಾರುತ್ತಿದ್ದೆ. ಇವತ್ತೂ ಹೋಗಿ ಕೇಳಿದ್ರೆ ತರಕಾರಿ ಮಾರುತ್ತಿದ್ದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಎನ್ನುತ್ತಾರೆ. ಅದೇ ರೀತಿ ಟೀ ಮಾರುತ್ತಿದ್ದ ಮೋದಿಯೂ ಪ್ರಧಾನಿಯಾಗುತ್ತಾರೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯನ್ನು ಅಧಿಕಾರಕ್ಕೆ ತರಲು ದೇವ ದುರ್ಲಭ ವಾತಾವರಣವಿದೆ. ಕೇಂದ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆರ್ಥಿಕ ಪ್ರಗತಿ ಆಗಿಲ್ಲ. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ಜನರೇ ಹೇಳಿದ ನಂತರ ಪಕ್ಷ ಘೋಷಿಸಿದೆ ಎಂದರು.