ನಾಳೆ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ
ಸಾಗರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ತಾಲೂಕು ಪಂಚಾಯತ್, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜ.28ರಂದು ನಗರಸಭೆ ಆವರಣದ ಗಾಂಧಿಮೈದಾನದಲ್ಲಿ ಒಂದು ದಿನದ ತಾಲೂಕು ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದೆ.
ಬೆಳಿಗ್ಗೆ 9ಕ್ಕೆ ಡಾ.ಬಿ.ಉದಯಕುಮಾರ ಶೆಟ್ಟಿ ರಾಷ್ಟ್ರಧ್ವಜ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಟಿ.ಸಿದ್ದಪ್ಪ ನಾಡಧ್ವಜವನ್ನು ಹಾಗೂ ಪರಿಷತ್ತಿನ ಅಧ್ಯಕ್ಷ ವಿ.ಟಿ.ಸ್ವಾಮಿ ಪರಿಷತ್ತು ಧ್ವಜಾರೋಹಣ ನೆರವೇರಿಸುವರು. 10ಗಂಟೆಗೆ ಬಾಲಕಲಾವಿದ ಅತ್ರಿ ಹುಲ್ಕೋಡು ಸಮ್ಮೇಳನವನ್ನು ಉದ್ಘಾಟಿಸೈಲಿದ್ದು, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ನಾ.ಡಿಸೋಜ ಆಶಯ ನುಡಿಗಳನ್ನಾಡಲಿದ್ದಾರೆ. ಸಮ್ಮೇಳನದ ಅಧ್ಯಕ್ಷತೆಯನ್ನು ಅನೀಶ ಎಸ್.ಶರ್ಮ ವಹಿಸಲಿದ್ದಾರೆ.
ಮಕ್ಕಳ ಪ್ರಥಮ ಸಮ್ಮೇಳನ ಅಧ್ಯಕ್ಷೆ ಶ್ರಾವ್ಯ ಸಾಗರ್, ತಾಪಂ ಅಧ್ಯಕ್ಷ ಹರೀಶ್ ಘಂಟೆ, ಉಪವಿಭಾಗಾಧಿಕಾರಿ ಡಾ.ಉದಯಕುಮಾರ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ, ಜಿಪಂ ಸದಸ್ಯರಾದ ಸುಮಂಗಲ ರಾಮಕೃಷ್ಣ, ಲಲಿತಾ ನಾರಾಯಣ್, ತಾಲ್ಲೂಕು ಬಗರ್ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ, ಪೌರಾಯುಕ್ತ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಭಾಗವಹಿಸುವರು. ಸಮ್ಮೇಳನ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ಮಕ್ಕಳಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪರಿಷತ್ತಿನ ಕಾರ್ಯದರ್ಶಿಗಳಾದ ವಿ.ಶಂಕರ್ ಹಾಗೂ ಜಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.