ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಜೆಪಿ ಸೇರುವ ಸುಳಿವು ನೀಡಿದ ಬೇಳೂರು

Vishwanath S
Updated On : 28 Jan 2014, 11:43 am

ಕ.ಪ್ರ.ವಾರ್ತೆ ,  ಹೊಸನಗರ ,  ಜ. 27
ತಾಲೂಕಿನ ಬ್ರಹ್ಮೇಶ್ವರ ವೀರಶೈವ ಸಭಾ ಭವನದಲ್ಲಿ ಬೆಂಬಲಿಗರ ಸಭೆ ನಡೆಸಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ದೇಶದ ಹಿತದೃಷ್ಟಿಯಿಂದ ರಾಷ್ಟ್ರೀಯ ಪಕ್ಷವೊಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಪರೋಕ್ಷವಾಗಿ ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ.
ಸಭೆ ನಡೆಸಿದ ಬೇಳೂರು ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಅಭಿಪ್ರಾಯ ಕೇಳಿದರು. ಬೆಂಬಲಿಗರಲ್ಲಿ ಬಹುತೇಕರು ಬಿಜೆಪಿ ಸೇರುವ ಮೂಲಕ ಮರಳಿ ಗೂಡಿಗೆ ಬರುವಂತೆ ಮನವಿ ಮಾಡಿದರು.
ಕಾಗೋಡು ವಿರುದ್ಧ ವಾಗ್ದಾಳಿ; ಬಣ್ಣದ ಬಟ್ಟೆ, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಓಡಾಡಿದರೆ ಕ್ಷೇತ್ರ ಅಭಿವೃದ್ಧಿಯಾಗತ್ತಾ ಎಂದು ಕಾಗೋಡು ಹಿಂದೆ ತಮ್ಮ ವಿರುದ್ಧ ಆರೋಪ ಮಾಡಿದ್ದನ್ನು ಸ್ಮರಿಸಿದ ಬೇಳೂರು, ತಿಮ್ಮಪ್ಪನವರೇ ದಿನಕ್ಕೊಂದು ಸೂಟು ಹಾಕಿಕೊಂಡು ವಿಧಾನಸಭೆಯಲ್ಲಿ ಶಾಸಕರನ್ನು ಕುಂಡ್ರಿ, ಕುಂಡ್ರಿ ಎಂದು ಹೇಳುತ್ತಿದ್ದರೆ ಕ್ಷೇತ್ರ ಅಭಿವೃದ್ಧಿಯಾಗುತ್ತಾ ಎಂದು ತಿರುಗೇಟು ನೀಡಿದರು.
ಚುನಾವಣೆಗೆ ಮುನ್ನ ಅನಾರೋಗ್ಯ, ವಯಸ್ಸಾಗಿದೆ ಎಂದು ಹೇಳಿ ಮತದಾರರ ಸಿಂಪತಿ ಪಡೆದ ಕಾಗೋಡು ಅಧಿಕಾರ ಸಿಕ್ಕಿದ ಮೇಲೆ ಚುರುಕಾಗಿದ್ದಾರೆ. ಇದು ಚುನಾವಣೆಯಲ್ಲಿ ಜನರನ್ನು ಸೆಳೆಯಲು ಮಾಡಿದ ತಂತ್ರ. ಎರಡು ಬಾರಿ ನನ್ನ ವಿರುದ್ಧ ಸೋತು ಮತ್ತೆ ಗೆದ್ದ ಕಾಗೋಡು ಉತ್ತಮವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯೊಂದಿಗೆ ಸುಮ್ಮನಿದ್ದೆ. ಆದರೆ ಈವರೆಗೂ ಕ್ಷೇತ್ರಕ್ಕೆ ಅನುದಾನ ತರಲು ವಿಫಲಾಗಿದ್ದಾರೆ ಎಂದರು.
ಬೇರೆ ಹಕ್ಕುಪತ್ರವಿಲ್ಲ: ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ನನ್ನ ಅವಧಿಯಲ್ಲಿ ಸಿದ್ಧವಾದ ಹಕ್ಕುಪತ್ರ ನೀಡುವಲ್ಲಿ ಮಾತ್ರ ಸಫಲರಾಗಿರುವ ಕಾಗೋಡು, ಬೇರೆ ಹಕ್ಕುಪತ್ರ ನೀಡುವಲ್ಲಿ ವಿಫಲರಾಗಿದ್ದಾರೆ. ಚುನಾವಣೆಗೆ ಮುನ್ನ ಅರಣ್ಯ ಸಮಸ್ಯೆ, ಒತ್ತುವರಿ ಸಮಸ್ಯೆ ಬಗೆಹರಿಸುವ ಮಾತನಾಡಿ, ಈಗ ಕೋರ್ಟ್ ಆದೇಶ ಎಂದು ಹೇಳುವ ಮೂಲಕ ಬಡರೈತ, ಅರಣ್ಯ ಮೂಲನಿವಾಸಿಗಳನ್ನು ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಸುಳಿವು: ಭಾಷಣದುದ್ದಕ್ಕೂ ಕಾಗೋಡನ್ನು ಟೀಕಿಸಿದ ಬೇಳೂರು 15 ದಿನದೊಳಗೆ ರಾಷ್ಟ್ರೀಯ ಪಕ್ಷವೊಂದನ್ನು  ಸೇರುವುದಾಗಿ ಹೇಳಿ ಬಿಜೆಪಿ ಸೇರುವ ಸುಳಿವನ್ನು ನೀಡಿದರು.
ಪ್ರಮುಖರಾದ ಕಲಸೆ ಚಂದ್ರಪ್ಪ, ದೀನದಯಾಳ್, ಕಾಯಿ ತಿಮ್ಮಪ್ಪ, ಪರಮೇಶ್ವರಪ್ಪ, ಸಾರ3ು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement