ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೃಷಿಯನ್ನು ಪ್ರೀತಿಸುವ ವಾತಾವರಣ ಸೃಷ್ಟಿಸಬೇಕಿದೆ

Vishwanath S
Updated On : 29 Jan 2014, 11:24 am

ಶಿವಮೊಗ್ಗ: ಕೃಷಿ ಕುರಿತ ಆತಂಕದ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುವ ಅಗತ್ಯವಿದೆ. ಎಲ್ಲರೂ ಕೃಷಿ ಮಾಡಲು ಆತಂಕ ಎದುರಿಸುವ ಸಂದರ್ಭ ನಿರ್ಮಾಣ ಆಗಿದೆ. ಪ್ರೀತಿಯಿಂದ ಕೃಷಿ ಮಾಡುವ ವಾತಾವರಣ ನಿರ್ಮಾಣ ಆಗಬೇಕು. ಈ ನಿಟ್ಟಿನಲ್ಲಿ ಚಿಂತನೆ ನಡೆಯಬೇಕು ಎಂದು ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ಕರೆ ನೀಡಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ನವಿಕೆ ಕೃಷಿ ಮಹಾವಿದ್ಯಾಲಯದ ಹಮ್ಮಿಕೊಂಡ ಅಂತರ ಕಾಲೇಜು ಯುವಜನ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರಮದಿಂದ ಅರ್ಜಿಸಿ ಕುಬೇರನಾಗಬೇಕೆಂಬುದು ಜನಪದರ ಆಶಯವಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಬಹುತೇಕರು ಸರಳವಾಗಿ ಹಣ ಗಳಿಸುವ ಧಾವಂತದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಆತಂಕ ನಿವಾರಿಸಿ: ಹಬ್ಬಗಳಿಗೂ ಕೃಷಿಗೂ ಸಂಬಂಧವಿದೆ. ಕೃಷಿಗೂ ಸಂಸ್ಕೃತಿಗೂ ಸಂಬಂಧವಿದೆ ಎಂದ ಅವರು ಇವೆಲ್ಲವೂ ಆಚರಣೆಗಳಿಂದ ಅನುಭಾವಕ್ಕೆ ಬರುತ್ತವೆ ಎಂದ ಅವರು, ಕೃಷಿಗೂ ಮಳೆ ನಕ್ಷತ್ರಗಳಿಗೂ ಸಂಬಂಧವಿರುವಂತೆ ರೈತ ಮತ್ತು ಪ್ರಕೃತಿಯ ನಡುವೆ ಅವಿನಾಭಾವ ಸಂಬಂಧವಿದೆ.
ಕೃಷಿ ವ್ಯವಸ್ಥೆ ಹಾಗೂ ಜನಪದರನ್ನು ಅರ್ಥೈಸಿಕೊಳ್ಳಲು ಆಚರಣೆಗಳು ಪೂರಕವಾಗಿವೆ ಎಂದ ಅವರು ಕೃಷಿ ಕ್ಷೇತ್ರದ ಸಮಸ್ಯೆ, ಆತಂಕಗಳ ನಿವಾರಣೆಗೆ ಅರ್ಥಪೂರ್ಣ ಚರ್ಚೆಗಳು ನಡೆಯಬೇಕೆಂದರು.
ಭೂಮಿ ಇಲ್ಲದೆ ರಂಗಭೂಮಿ ಇಲ್ಲ, ಮನುಷ್ಯ ಅರ್ಥಪೂರ್ಣವಾಗಿ ಬದುಕಲು ರಂಗಭೂಮಿ ಸಹಕಾರಿಯಾಗಿದೆ. ಜನಪದ ಕವಿಗಳ, ಅನುಭವಿಗಳ ಆಶಯದಂತೆ ಇಲ್ಲಿನ ಸಂಸ್ಕೃತಿ, ಆಚಾರ- ವಿಚಾರಗಳು ಹಬ್ಬದಂತೆ ಆಚರಣೆಗೆ ಬರಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಎಂ.ಎಸ್. ವಿಘ್ನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಶಿಕ್ಷಣ ನಿರ್ದೇಶಕ ಡಾ. ಎ.ಎಸ್. ಕುಮಾರಸ್ವಾಮಿ ಅವರು ಇಂಚರ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಕುಲಸಚಿವ ಗಣೇಶಬಾಬು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಶಬ್ಬೀರ್ ಪಟೇಲ್ ಪ್ರಾರ್ಥಿಸಿದರು. ಎಂ. ಮಂಜುನಾಥ ಸ್ವಾಗತಿಸಿದರು. ಡಾ. ನಾರಾಯಣ ಎಸ್. ಮಾವರ್ಕರ್ ನಿರೂಪಿಸಿ ಡಾ. ಗಂಗಾಪ್ರಸಾದ್ ವಂದಿಸಿದರು.
ಸಂಭ್ರಮ, ಸಡಗರ...
ಈ ಯುವಜನೋತ್ಸವದಲ್ಲಿ ಮೂಡಿಗೆರೆ, ಪೊನ್ನಂಪೇಟೆ, ಹಿರಿಯೂರು ಮತ್ತು ಶಿವಮೊಗ್ಗ ಕೃಷಿ ಮತ್ತು ಕೃಷಿ ಸಂಬಂಧಿತ ಕಾಲೇಜುಗಳ ಸ್ಪರ್ಧಿಗಳು ಭಾಗವಹಿಸಿದ್ದು, ಕೃಷಿ ವಿವಿ ಆವರಣದಲ್ಲಿ ಸಂಭ್ರಮ, ಸಡಗರ ಮೇಳೈಸಿದೆ.
ದೇಸೀ ಸಾಂಸ್ಕೃತಿಕ ಚೌಕಟ್ಟು ಬೆಳವಣಿಗೆಯಲ್ಲಿ ಅಹರ್ನಿಶಿ ತೊಡಗಿಸಿಕೊಂಡಂತಹ ರಂಗನಿರ್ದೇಶಕ ಚಿದಂಬರರಾವ್ ಜಂಬೆ ಯುವಜನೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಸಾಂಕೇತಿಕವಾಗಿ ಸಾಂಸ್ಕೃತಿಕ ತಂಡಗಳು ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಿ, ಅತಿಥಿಗಳಿಗೆ ಗೌರವ ಸಲ್ಲಿಸಿದವು.
ಎರಡು ದಿನಗಳ ಮೇಳದಲ್ಲಿ ಲಘು ಸಂಗೀತ, ಸಮೂಹ ಗಾಯನ, ಸಮೂಹ ಗಾಯನ, ತುಣುಕು ಚಿತ್ರ ರಚನೆ, ರಂಗೋಲಿ, ಏಕಾಂಕ ನಾಟಕ, ಮಣ್ಣಿನಾಕೃತಿ ರಚನೆ, ಸ್ಥಳದಲ್ಲಿ ಚಿತ್ರ ರಚನೆ, ಚರ್ಚಾ ಸ್ಪರ್ಧೆ, ವಾಕ್ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಲಘು ಪ್ರಹಸನ, ಏಕ ಪಾತ್ರಾಭಿನಯ, ವ್ಯಂಗ್ಯಚಿತ್ರ ರಚನೆ, ಭಿತ್ತಿ ಪತ್ರ ರಚನೆ, ರಸಪ್ರಶ್ನೆ, ಸಮೂಹ ನೃತ್ಯ ಸ್ಪರ್ಧೆಗಳು ನಡೆಯುತ್ತಿವೆ.
ಕೃಷಿ ಪದವೀಧರರ ವಿವಾಹ ವಿಚ್ಛೇದನ ಕಡಿಮೆ
ಇಂಡಿಯನ್ ಜರ್ನಲ್ ಆಫ್ ಅಪ್ಲೈಡ್ ಸೈಕಾಲಜಿ ಮೂರನೇ ವ್ಯಾಲ್ಯೂಮ್‌ನಲ್ಲಿ ಪ್ರಕಟಗೊಂಡ ಸಂಶೋಧನಾ ಲೇಖನದ ಕುರಿತು ವೇದಿಕೆ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಕೃಷಿ ಮತ್ತು ತೋಟಗಾರಿಕೆ ವಿವಿ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಎಂ.ಎಸ್. ವಿಘ್ನೇಶ್, ಅಚ್ಚರಿಯ ಅಂಕಿ-ಅಂಶ ಸಹಿತ ಮಾಹಿತಿ ನೀಡಿದರು. ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಡೈವರ್ಸ್, ಫ್ಯಾಮಿಲಿ ಡಿಸ್ ಆರ್ಗನೈಸೇಶನ್ ಏಕೆ ಆಗುತ್ತಿದೆ ಎಂಬುದರ ಕುರಿತು ಡೆಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಸಂಸ್ಥೆ ಅಧ್ಯಯನ ನಡೆಸಿತು. ಶಿಕ್ಷಣ ಮತ್ತು ಕೌಟುಂಬಿಕ ವಿಸಂಘಟನೆಗೂ (ಡೈವರ್ಸ್‌ಗೂ) ಸಂಬಂಧ ಏನು ಎಂಬುದು ಸಂಶೋಧನೆ ಮೂಲ ಅಂಶ. ವೈದ್ಯಕೀಯ, ಎಂಜಿನಿಯರಿಂಗ್, ಲಾ, ಸಾಮಾನ್ಯ ಪದವಿ ಜೊತೆಗೆ ಕೃಷಿ ಶಿಕ್ಷಣವನ್ನು ತೆಗೆದುಕೊಂಡವರ ಪೈಕಿ ಯಾರಲ್ಲಿ ಎಷ್ಟು ಡೈವೋರ್ಸ್‌ಗಳಿವೆ ಎಂಬುದನ್ನು ಲೆಕ್ಕ ಹಾಕಲಾಯಿತು. ಆಶ್ಚರ್ಯ ಎಂದರೆ ಕೃಷಿಯೇತರ ಎಲ್ಲಾ ಶಿಕ್ಷಣ ಪಡೆದವರ ಒಂದು ಸಾವಿರ ಮದುವೆಗಳಲ್ಲಿ ಮೂವತ್ತು ಮದುವೆಗಳು ಕೋರ್ಟ್‌ಗಳಲ್ಲಿ ಡೈವರ್ಸ್ ಪಿಟಿಶನ್ ಇದೆ. ಕೃಷಿ ಶಿಕ್ಷಣ ಪಡೆದಂತಹವರ ಐದು ಸಾವಿರ ಮದುವೆಗಳಲ್ಲಿ ಒಂದು ಡೈವರ್ಸ್ ರೇಟ್ ಇದೆ.
ಇದಕ್ಕೆ ನಮ್ಮಲ್ಲಿ ಶಿಕ್ಷಣ ವ್ಯವಸ್ಥೆ ಕಾರಣ. ಎಲ್ಲಿ ಸೃಜನಶೀಲತೆ ಇರುತ್ತದೆಯೋ ಅಲ್ಲಿ ವಿವೇಕ ಇರುತ್ತದೆ. ಎಲ್ಲಿ ವಿವೇಕ ಇರುತ್ತದೆಯೋ ಅಲ್ಲಿ ಮಾನವೀಯತೆ ಇರುತ್ತದೆ. ಶಿಕ್ಷಣ ಮಾನವೀಯ ಮೌಲ್ಯಗಳಿಗೆ ಸಾಂಸ್ಕೃತಿಕ ಹಂದರಕ್ಕೆ ಪ್ರಾಧಾನ್ಯತೆ ಕೊಡುತ್ತೇವೆಯೋ ಆ ಶಿಕ್ಷಣ ಸರ್ವಕಾಲಿಕ, ಸಾರ್ವತ್ರಿಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement