ಪಠ್ಯದಲ್ಲಿ ಮಕ್ಕಳ ಸಾಹಿತ್ಯ ಸೇರ್ಪಡೆಯಾಗಲಿ
ಕ.ಪ್ರ.ವಾರ್ತೆ , ಸಾಗರ , ಜ. 28
ಸಾಹಿತ್ಯ, ಸಂಸ್ಕೃತಿ ಎಲ್ಲದರ ಒಟ್ಟು ಆಶಯ ಸುತ್ತಲಿನ ಪರಿಸರವನ್ನು, ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವುದಾಗಬೇಕು ಎಂದು ಸಾಗರ ತಾಲೂಕು ಮಟ್ಟದ ಮಕ್ಕಳ 2ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಅನೀಶ್ ಎಸ್. ಶರ್ಮಾ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಕ್ಕಳ 2ನೇ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ನಿಸರ್ಗದ ಸುಂದರ ತಾಣದಲ್ಲಿ ಬೆಳೆದು, ಆದರ್ಶದ ಬದುಕು ರೂಪಿಸಿಕೊಂಡು ಈ ನೆಲದ ಕೀರ್ತಿಯನ್ನು ಬೆಳಗಿಸುವ ಕೀರ್ತಿ ನಮ್ಮದಾಗಬೇಕು ಎಂದು ಅಭಿಪ್ರಾಯಪಟ್ಟರು.
ಅಪಾಯ ಕಟ್ಟಿಟ್ಟ ಬುತ್ತಿ: ಆಧುನಿಕತೆಯ ಶಾಪಕ್ಕೆ ಮಲೆನಾಡಿನ ಸಿರಿ ಕಳಚಿ ಹೋಗುತ್ತಿದೆಯೇ ಎಂಬ ಆಂತಕ ಕಾಡುತ್ತಿದೆ. ಸುಂದರ ಪ್ರಕೃತಿಯಿಂದಲೇ ಸೊಬಗು ಕಂಡ ಮಲೆನಾಡಿಗೆ ನಮ್ಮಿಂದ ಎಂದಿಗೂ ಮಾರಕವಾಗಬಾರದು. ಶರಾವತಿ, ವರದೆಯರು ಇಂಗಬಾರದು.
ಪಠ್ಯವಾಗಲಿ: ಪಠ್ಯ ಪುಸ್ತಕಗಳಲ್ಲಿ ಮಕ್ಕಳ ಸಾಹಿತ್ಯವೂ ಸೇರ್ಪಡೆಗೊಳ್ಳಬೇಕು. ಮಕ್ಕಳ ಸಾಹಿತ್ಯ ಕೃತಿಗಳು ಗ್ರಂಥಾಲಯ ಸೇರಬೇಕು. ಮಕ್ಕಳ ಸಾಹಿತ್ಯದ ಧ್ವನಿಯನ್ನು ವಿವೇಚಿಸಿ ದಾರಿದೀಪವಾಗಿ ಹಿರಿಯರು ಸಲ್ಲಬೇಕು ಎಂದರು.
ಪಣ ತೊಡಬೇಕು: ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಶ್ರಾವ್ಯ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಕನ್ನಡ ಕಟ್ಟುವ ಕೆಲಸ ಕೇವಲ ಕನಸಾಗಿ ಉಳಿಯದೆ ನಿರ್ದಿಷ್ಟ ಗುರಿ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಬಲ ಇಚ್ಛಾಶಕ್ತಿಯನ್ನು ಹೊಂದಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಖಾಸಗಿ ಶಾಲೆಗಳಿಂದ ಕನ್ನಡಕ್ಕೆ ಕುತ್ತು ಬಂದಿದೆ. ಖಾಸಗಿ ಶಾಲೆಗಳ ಲಾಬಿ ಸರ್ಕಾರಿ ಶಾಲೆಗಳನ್ನು ಮುಚ್ಚಿಸುತ್ತಿದೆ. ಈ ದಿಸೆಯಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರು ಕೇವಲ ಸಂಬಳಕ್ಕಾಗಿ ಕೆಲಸ ಮಾಡದೆ ಗುಣಮಟ್ಟದ ಶಿಕ್ಷಣ ನೀಡುವ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದರು.
ಉಪವಿಭಾಗಾಧಿಕಾರಿ ಡಾ.ಉದಯಕುಮಾರ ಶೆಟ್ಟಿ, ತಾಪಂ ಅಧ್ಯಕ್ಷ ಹರೀಶ ಗಂಟೆ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ ಮಾತನಾಡಿದರು.
ಸಮ್ಮೇಳನವನ್ನು ಬಾಲ ಕಲಾವಿದ ಅತ್ರಿ ಹುಲ್ಕೋಡು ಉದ್ಘಾಟಿಸಿದರು. ತಾಲ್ಲೂ ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ತಹಸೀಲ್ದಾರ್ ಸಾಜಿದ್ ಅಹಮದ್ ಮುಲ್ಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ, ಜಿಪಂ ಸದಸ್ಯರಾದ ಲಲಿತಾ ನಾರಾಯಣ, ಸುಮಂಗಲ, ಅ.ಪು. ನಾರಾಯಣಪ್ಪ, ಮ.ಸ. ನಂಜುಂಡಸ್ವಾಮಿ, ಬಸವರಾಜ್, ಸಿ.ಕೃಷ್ಣಪ್ಪ, ಕೆ.ವಿ.ಗಂಗಾಧರ್ ಹಾಜರಿದ್ದರು.