'ಸೇವಾ ನಿಯಮ ಅರಿತು ಕೆಲಸ ನಿರ್ವಹಿಸಿ'
ಶಿವಮೊಗ್ಗ: ಸರ್ಕಾರಿ ಸೇವೆಗೆ ನಿಯುಕ್ತರಾದವರೆಲ್ಲರೂ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದವರೇ ಆಗಿರುತ್ತಾರೆ. ಆದರೂ, ಕೆಲವು ಸಂದರ್ಭಗಳಲ್ಲಿ ವಿವೇಕರಲ್ಲದವರಂತೆ ವರ್ತಿಸುತ್ತಾರೆ. ಇಲಾಖಾ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ನೌಕರರು ಅನೇಕ ಸಮಸ್ಯೆ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಚ್.ಆರ್. ರಾಜಪ್ಪ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಸರ್ಕಾರಿ ನೌಕರರ ಸೇವಾ ಅವಧಿಯ ಖಾಯಮಾತಿ ಮತ್ತು ಪದನ್ನೋತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು ವರ್ಷಕ್ಕೆ ಎರಡು ಬಾರಿ ನಡೆಸುವ ಇಲಾಖಾ ಪರೀಕ್ಷೆಗಳನ್ನು ಬರೆಯುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನುಕೂಲಕ್ಕಾಗಿ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾಲಕಾಲಕ್ಕೆ ಅಪ್ಡೇಟ್ ಆಗಿ: ಇಲಾಖೆಗಳಲ್ಲಿನ ನೌಕರರು ಕೆಲಸದ ಒತ್ತಡಗಳಿಂದಾಗಿ ಮತ್ತು ಕೆಲಮೊಮ್ಮೆ ಅನಾಸಕ್ತಿಯಿಂದಾಗಿಯೂ ಕೆಲವು ಸಂದರ್ಭಗಳಲ್ಲಿ ತಮ್ಮ ಕೆಲಸಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅದಕ್ಕಾಗಿ ನೌಕರರ ಬುದ್ದಿಮತ್ತೆಯನ್ನು ಕಾಲಕಾಲಕ್ಕೆ ಒರೆಗೆ ಹಚ್ಚುವ ಕಾರ್ಯಗಳಾಗಬೇಕು. ಅದಕ್ಕಾಗಿ ಇಂತಹ ಸೇವಾ ನಿಯಮಗಳನ್ನು ನೌಕರರು ಅರ್ಥೈಸಿಕೊಳ್ಳುವುದರಿಂದ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಜಾಗ್ರತೆಯಿಂದ ಕಾರ್ಯ ನಿರ್ವಹಿಸಿ: ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಣ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಾಣೇಶ್ ಮಾತನಾಡಿ, ಸೇವಾ ನಿಯಮಗಳನ್ನು ಅರಿತು ಜಾಗ್ರತೆಯಿಂದ ಕಾರ್ಯನಿರ್ವಹಿಸುವುದು ಪ್ರಮುಖವಾದುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಇಲಾಖಾ ಪರೀಕ್ಷೆ ಬರೆಯಲಿಚ್ಚಿಸುವ ಎಲ್ಲಾ ನೌಕರರು ಈ ತರಬೇತಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಪ್ಪ, ಸಂಪನ್ಮೂಲ ವ್ಯಕ್ತಿ ನಿವೃತ್ತ ಖಜಾನಾಧಿಕಾರಿ ಚನ್ನವೀರಸ್ವಾಮಿ, ಗುರುಲಿಂಗಪ್ಪ ಶೆಟ್ಟಿ, ಕೆ. ತಮ್ಮಣ್ಣ ಸೇರಿದಂತೆ ಜಿಲ್ಲಾ ನೌಕರರ ಸಂಘದ ಪದಾಧಿಕಾರಿ ಹಾಗೂ ನೌಕರರು ಉಪಸ್ಥಿತರಿದ್ದರು. ಬಾಲಚಂದ್ರ ಸ್ವಾಗತಿಸಿದರು. ಮಾರುತಿ ನಿರೂಪಿಸಿ, ಪಾಟೀಲ್ ವಂದಿಸಿದರು.