ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ಒತ್ತಾಯ
ಶಿವಮೊಗ್ಗ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ವೇತನ ಹೆಚ್ಚಳ, ಪ್ರತಿ ತಿಂಗಳು ವೇತನ ನೀಡುವಂತೆ ಒತ್ತಾಯಿಸಿ ಸರ್ಕಾರಿ ಅತಿಥಿ ಉಪನ್ಯಾಸಕರು ಬುಧವಾರ ಬೀದಿಗಿಳಿದು ಹೋರಾಟ ನಡೆಸಿದರು.
ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಉಪನ್ಯಾಸಕರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದರು.
ಸೇವಾ ಭದ್ರತೆ ಇಲ್ಲ: ನಮ್ಮ ಬೋಧನಾ ಸೇವೆಯನ್ನು ಸರ್ಕಾರ ಸಂದರ್ಭಕ್ಕನುಸಾರವಾಗಿ ಬಳಸಿಕೊಳ್ಳುತ್ತಿದೆ. ಆದರೆ, ನಮ್ಮ ಸ್ಥಿತಿ ಮಾತ್ರ ದಯನೀಯವಾಗಿದೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಬದಲಾವಣೆ ಮಾಡುತ್ತಿದ್ದು, ಈ ಹಿಂದೆ ಸೇವೆ ಸಲ್ಲಿಸಿದ ಹಿರಿಯ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡದೇ ಬದುಕುವ ಹಕ್ಕನ್ನು ಕಸಿಯುತ್ತಿದೆ ಎಂದು ಅತಿಥಿ ಉಪನ್ಯಾಸಕರು ಆತಂಕ ವ್ಯಕ್ತಪಡಿಸಿದರು.
ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಮಾಸಿಕ 10 ಸಾವಿರ-8 ಸಾವಿರ ರುಪಾಯಿ ರುಪಾಯಿ ಗೌರವ ವೇತನವನ್ನು ವರ್ಷದ ಕೊನೆಯಲ್ಲಿ ನೀಡುತ್ತಾ ಬಂದಿದೆ. ಇದರಿಂದ ಜೀವನ ನಡೆಸುವುದು ತುಂಬಾ ದುಸ್ತರವಾಗಿದೆ. ಜೊತೆಗೆ ಒಂದೇ ಕಾಲೇಜಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಆದೇಶ ಹೊರಡಿಸಿರುವುದರಿಂದ ಅಲ್ಪ ಗೌರವಧನದಲ್ಲಿ ಸಂಸಾರ ನಿರ್ವಹಿಸುವುದು ಕಷ್ಟವಾಗಿದೆ ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಪ್ರತಿಭಟನೆಯಲ್ಲಿ ಚಂದ್ರಪ್ಪ, ಅರುಣಾಚಲ, ಸಂಪತ್, ರಾಜು, ನೂರುಲ್ಲಾ ಮೊದಲಾದವರು ಇದ್ದರು.