ಇಂದು ಉಪವಾಸ ಸತ್ಯಾಗ್ರಹ
ಕ.ಪ್ರ.ವಾರ್ತೆ, ಸಾಗರ, ಜ.29
ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕೈಮಗ್ಗ ಸತ್ಯಾಗ್ರಹದ ಅಂಗವಾಗಿ ಜನವರಿ 30ರ ಸರ್ವೋದಯ ದಿನಾಚರಣೆಯಂದು ರಾಜ್ಯದ ವಿವಿಧೆಡೆಗಳಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರಂಗಕರ್ಮಿ, ಚರಕ ಸಂಸ್ಥೆ ರೂವಾರಿ ಪ್ರಸನ್ನ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ತಾಲೂಕಿನ ಹೆಗ್ಗೋಡು ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಬೆಳಗ್ಗೆ 10ರಿಂದ ಸರ್ವೋದಯ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ರೈತ ಮುಖಂಡ ಕಡಿದಾಳು ಶ್ಯಾಮಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಾಹಿತಿ ಡಾ.ನಾ. ಡಿಸೋಜ, ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ವಿಮರ್ಶಕ ಡಿ.ಎಸ್. ನಾಗಭೂಷಣ್, ಕವಯತ್ರಿ ಆರತಿ, ಸವಿತಾ ನಾಗಭೂಷಣ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಕೈಮಗ್ಗ ಸತ್ಯಾಗ್ರಹಕ್ಕೆ ಬೆಂಬಲವಾಗಿ ನಾನು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದೇನೆ ಎಂದರು.
ಪ್ರಮುಖ ಬೇಡಿಕೆ: ಕೈಮಗ್ಗ ನೇಕಾರರು ತಮ್ಮ ಐದು ಪ್ರಮುಖ ಬೇಡಿಕೆ ಇರಿಸಿಕೊಂಡು ಪಾದಯಾತ್ರೆ ನಡೆಸಿದ್ದಾರೆ. ನೇಕಾರರ ಬೇಡಿಕೆ ಈಡೇರಿಸಲು ಸರ್ಕಾರ ಹೊಸ ಕಾನೂನು, ಹಣಕಾಸಿನ ಘೋಷಣೆ ಮಾಡುವ ಅಗತ್ಯವಿಲ್ಲ. 1985ರಲ್ಲಿ ಜಾರಿಗೆ ತಂದ ಕೈಮಗ್ಗ ಮೀಸಲಾತಿ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ತರುವ ನಿಟ್ಟಿನಲ್ಲಿ ಸರ್ಕಾರ ವಿಧಾನಸಭೆಯಲ್ಲಿ ಚರ್ಚಿಸಿ, ನೇಕಾರರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಹಠಕ್ಕಾಗಿ ಹೋರಾಟ ಅಲ್ಲ: ಸತ್ಯಾಗ್ರಹ ಕೈಬಿಡುವಂತೆ ಯು.ಆರ್.ಅನಂತಮೂರ್ತಿ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರಸನ್ನ, ಇದು ಹಠಕ್ಕೆ ಬಿದ್ದು ಮಾಡುತ್ತಿರುವ ಹೋರಾಟ ಅಲ್ಲ. ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಮಾಡುತ್ತಿರುವ ಹೋರಾಟವೂ ಅಲ್ಲ. ಸಮಗ್ರ ಗ್ರಾಮ ಅಭಿವೃದ್ಧಿಯ ಸತ್ಯಾಗ್ರಹ ಇದಾಗಿದ್ದು, ಈ ಮೂಲಕ ಸರ್ಕಾವನ್ನಷ್ಟೇ ಅಲ್ಲ ಜನರನ್ನೂ ಕೂಡ ಎಚ್ಚರಿಸುತ್ತಿದ್ದೇವೆ. ಯಾವುದೇ ಸರ್ಕಾರ ಅಥವಾ ರಾಜಕೀಯ ಪಕ್ಷಗಳ ವಿರುದ್ಧದ ಹೋರಾಟವೂ ಇದಲ್ಲ ಎನ್ನುವುದನ್ನು ಅನಂತಮೂರ್ತಿಯವರು ಅರ್ಥಮಾಡಿಕೊಳ್ಳಬೇಕು ಎಂದರು.
ಸರ್ಕಾರ ಕೈಮಗ್ಗ ನೇಕಾರರ ಬೇಡಿಕೆ ಈಡೇರಿಸುವ ಜೊತೆಗೆ ಬಿಟ್ಟು ಹೋಗಿರುವ ನೇಕಾರರು ಪುನಃ ಬರುವತನಕ ಈ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಹೇಳಿದರು.
ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟದ ಸಂಚಾಲಕಿ ಗೌರಮ್ಮ, ಎಂ.ಎನ್.ಕುಲಕರ್ಣಿ ಇದ್ದರು.