ಕಾಂಗ್ರೆಸ್ ಹಠಮಾರಿತನಕ್ಕೆ ಬಿಜೆಪಿ ಮೌನ ಸಮ್ಮತಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.29
ಕರ್ನಾಟಕ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವೇತನ, ನಿವೃತ್ತಿ ವೇತನ, ಭವಿಷ್ಯ ನಿಧಿ ಇತರೆ ಸೌಲಭ್ಯಗಳ ನಿಯಂತ್ರಣ ವಿಧೇಯಕ-2014 ಮಸೂದೆ ಕೆಳಮನೆಯಲ್ಲಿ ಅಂಗೀಕಾರವಾಗಿದೆ. ಇದರಿಂದ ರಾಜ್ಯದ 25 ಸಾವಿರಕ್ಕೂ ಅಧಿಕ ನೌಕರರಿಗೆ ಅನ್ಯಾಯ ಆಗುತ್ತಿದೆ ಎಂಬ ಗಂಭೀರ ದನಿ ಕೇಳಿಬಂದಿದೆ. ಈ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಬೇಕಾಗಿದ್ದ ಪ್ರಮುಖ ಪ್ರತಿಪಕ್ಷ ಬಿಜೆಪಿ ಸಹ ಮೌನಕ್ಕೆ ಶರಣಾಗಿದ್ದರೆ, ಕಾಂಗ್ರೆಸ್ ಹಠಮಾರಿ ಧೋರಣೆಗೆ ಅಂಟಿಕೊಂಡಿದೆ.
ಹಿನ್ನೆಲೆ: ರಾಜ್ಯದಲ್ಲಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುದಾನಕ್ಕೆ ಒಳಪಟ್ಟಿದ್ದು, ಅನುದಾನ ರಹಿತ ಅವಧಿಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ಕಾಲಮಿತಿ ಬಡ್ತಿ, ವೇತನ, ಪಿಂಚಣಿ ಸೌಲಭ್ಯ ಹಾಗೂ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಉಚ್ಚನ್ಯಾಯಾಲಯ ಸರ್ಕಾರಕ್ಕೆ ಆದೇಶ ನೀಡಿತ್ತು.
3 ತಿಂಗಳ ಗಡುವು: ರಾಜ್ಯ ಸರ್ಕಾರ ಉಚ್ಚನ್ಯಾಯಾಲಯದ ತೀರ್ಪಿನ ವಿರುದ್ಧ ಹಣಕಾಸಿನ ಕಾರಣ ನೀಡಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತು. ಸುಮಾರು 7200 ಕೋಟಿ ಹಣ ಬೇಕಾಗುತ್ತದೆ. ಹೀಗಾಗಿ, ಅದು ಸಾಧ್ಯವೇ ಇಲ್ಲ ಎಂದು ಪಟ್ಟು ಹಿಡಿಯಿತು. ಆದರೆ, ಸರ್ವೋಚ್ಚ ನ್ಯಾಯಾಲಯವು ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿಹಿಡಿದು ಅನುದಾನಕ್ಕೆ ಒಳಪಟ್ಟ ಸಂಸ್ಥೆಗಳ ನೌಕರರ ಪರವಾಗಿ ತೀರ್ಪು ನೀಡಿ ಸರ್ಕಾರದ ಮೇಲ್ಮನವಿ ವಜಾಗೊಳಿಸಿತು. ಅಲ್ಲದೆ ನೌಕರರಿಗೆ ಅನುದಾನರಹಿತ ಅವಧಿಯಲ್ಲಿ ಶಾಲಾ-ಕಾಲೇಜುಗಳಿಗೆ ನೇಮಕಾತಿ ಹೊಂದಿದ ದಿನಾಂಕದಿಂದ ಅವರ ಸೇವೆ ಪರಿಗಣಿಸಿ ಎಲ್ಲ ಸೌಲಭ್ಯ ನೀಡುವಂತೆ ನಿರ್ದೇಶನ ನೀಡಿ, 3 ತಿಂಗಳ ಗಡುವು ವಿಧಿಸಿತು.
ಸರ್ಕಾರ ಮಾತ್ರ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಲೇ ಇಲ್ಲ. ಇದರಿಂದ ಅನೇಕ ಶಿಕ್ಷಕರು ಸುಪ್ರೀಂಕೋರ್ಟ್ನಲ್ಲಿ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಗುಜರಾಯಿಸಿದರು. ಅವರಿಗೆ ಸರ್ಕಾರ ಅನಿವಾರ್ಯವಾಗಿ ಸೌಲಭ್ಯ ಕಲ್ಪಿಸಿತು. ಆದರೆ, ಯಾರೂ ಅರ್ಜಿ ಹಾಕಲಿಲ್ಲವೋ ಅವರಿಗೆ ಯಾವುದೇ ಸೌಲಭ್ಯ ಕಲ್ಪಿಸಲು ಮುಂದಾಗಲಿಲ್ಲ.
ಈ ಮಧ್ಯೆಯೇ ಸುಗ್ರಿವಾಜ್ಞೆ ಸಿದ್ಧಪಡಿಸಿ ರಾಜ್ಯಪಾಲರಿಗೆ ಕಳುಹಿಸಿತು. ಆದರೆ, ಸುಪ್ರೀಂ ಕಟ್ಟಾಜ್ಞೆಯ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರ್ಕಾರಕ್ಕೆ ತಪರಾಕಿ ಹೊಡೆದಂತೆ ಸುಗ್ರಿವಾಜ್ಞೆ ವಾಪಾಸ್ ಕಳುಹಿಸಿ ಸದನದಲ್ಲಿ ಒಪ್ಪಿಗೆ ಪಡೆಯುವಂತೆ ಸೂಚಿಸಿದರು. ಅದರಂತೆ ರಾಜ್ಯ ಸರ್ಕಾರ ಸದ್ದಿಲ್ಲದೇ ಕಾಯ್ದೆ ರೂಪಿಸುವ ಕಾರ್ಯ ಮಾಡಿತು. ಇದು ಶಿಕ್ಷಕ ಸಮುದಾಯಕ್ಕೆ ಗೊತ್ತಾಗುವ ಮುಂಚೆಯೇ ಅದನ್ನು ಸದನದಲ್ಲಿ ತಂದು ಅನುಮೋದನೆಯನ್ನು ಪಡೆಯಿತು.
ಈ ಬೆಳವಣಿಗೆ ಶಿಕ್ಷಕ ಸಮುದಾಯದ ಗಂಭೀರ ಅಸಮಾಧಾನಕ್ಕೆ ಕಾರಣವಾಗಿದೆ. ಒಂದೆಡೆ ಸರ್ಕಾರ ಸಮಿತಿಯೊಂದನ್ನು ರಚಿಸಿ ವರದಿ ನೀಡುವಂತೆ ನಿರ್ದೇಶಿಸಿತ್ತು. ಇದನ್ನು ನಂಬಿಕೊಂಡು ಸೌಲಭ್ಯ ಅಪೇಕ್ಷಿತ ದೊಡ್ಡ ಸಮುದಾಯ ಸುಮ್ಮನಿತ್ತು. ಆದರೆ, ಸರ್ಕಾರ ಏಕಾಏಕಿ ಸದನದಲ್ಲಿ ವಿಧೇಯಕವನ್ನು ತಂದು ಒಪ್ಪಿಗೆ ಪಡೆದುಕೊಂಡಿದೆ.
ನಂಬಿದ್ದ ನೌಕರರು: ಪ್ರಮುಖ ವಿರೋಧ ಪಕ್ಷ ಈ ವಿಚಾರದಲ್ಲಿ ಯಾವುದೇ ಪ್ರತಿರೋಧ ವ್ಯಕ್ತಪಡಿಸದೇ ಸಮ್ಮತಿ ಸೂಚಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವೆಂದರೆ, ಈ ವಿಚಾರದಲ್ಲಿ ಬಿಜೆಪಿ ವಿರೋಧಿಸುವ ಶಕ್ತಿಯನ್ನೇ ಕಳೆದುಕೊಂಡಿದೆ. ನೌಕರರಿಗೆ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದೇ ಬಿಜೆಪಿ ಸರ್ಕಾರ.
ಹೀಗಾಗಿ, ಕಾಂಗ್ರೆಸ್ ತಾಳಕ್ಕೆ ತಕ್ಕಂತೆ ಬಿಜೆಪಿ ಹೆಜ್ಜೆ ಹಾಕಿದೆ ಎಂಬುದು ನೌಕರ ವರ್ಗದ ಅಭಿಪ್ರಾಯ.
ಈ ಮಧ್ಯೆಯೇ ಶಿಕ್ಷಣ ಸಚಿವರು ಹೋದಲ್ಲಿ ಬಂದಲ್ಲಿ ನೀವು ಕೋರ್ಟ್ಗೆ ಹೋಗುವುದು ಬೇಡ, ನಾವು ಎಲ್ಲವನ್ನೂ ಸರಿ ಮಾಡಿಕೊಡುತ್ತೇವೆಂದೇ ಈ ವರ್ಗದ ಸಿಬ್ಬಂದಿಗೆ ಹೇಳಿಕೊಂಡಿದ್ದರು. ಇದನ್ನು ನಂಬಿದ ನೌಕರರು ಕೋರ್ಟ್ಗೆ ಹೋಗುವುದಕ್ಕೂ ಮನಸ್ಸು ಮಾಡಲಿಲ್ಲ.
ಆದರೀಗ, ಯಾರೆಲ್ಲಾ ಸರ್ಕಾರದ ವಿರುದ್ಧ ಕೋರ್ಟ್ಗೆ ಹೋದರೋ ಅವರಿಗೆ ಸೌಲಭ್ಯಗಳು ಸಿಕ್ಕವು. ಯಾರು ಶಿಕ್ಷಣ ಸಚಿವರ ಮಾತು ನಂಬಿದರೋ ಅವರೆಲ್ಲಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹೀಗೆಂದು, ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಈಗ ಅಲವತ್ತುಕೊಳ್ಳುತ್ತಾರೆ.
ಸರ್ಕಾರದಿಂದ ಅಪೇಕ್ಷಿಸುವುದೇನು?: ಬಹುಪಾಲು ಸಿಬ್ಬಂದಿ ಅನುದಾನ ರಹಿತ ಅವಧಿಯಲ್ಲಿ ಸುಮಾರು 15-20 ವರ್ಷಗಳ ಸೇವೆ ಅತಿ ಕಡಿಮೆ ವೇತನದಲ್ಲಿ ಕೆಲಸ ಮಾಡಿದ್ದಾರೆ. ಅನೇಕರು ವೃತ್ತಿ ಜೀವನ ಕೊನೆಯ ಘಟ್ಟದಲ್ಲಿದ್ದಾರೆ. ಈ ಕಾಯ್ದೆಯಿಂದ ಇಂತವರಿಗೆ ಸರ್ಕಾರದ ಕಾಯ್ದೆ ಮಾರಕವಾಗಿ ಪರಿಣಮಿಸಲಿದೆ.
ಏಕೆಂದರೆ, ಅನುದಾನ ಲಭ್ಯವಾದಾಗ ನೇಮಕಾತಿ ನಡೆದಿದ್ದರಿಂದ ಕೆಲಸ ಕಾಯಂ ಆಯಿತೇ ಹೊರತು ಭೂತಕಾಲದ ಸೇವೆ ಪರಿಗಣನೆಯಾಗದೇ ಭವಿಷ್ಯದ ದಿನ ಸವಾಲಾಗಿದೆ. ಹಾಗೆಯೇ ಬಹುತೇಕ ಸಿಬ್ಬಂದಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಾಧ್ಯವಿಲ್ಲ. ಕೋರ್ಟ್ಗೆ ಹೋಗಬೇಕೆಂದರೆ ಕನಿಷ್ಠ 25000-30000 ಬೇಕಾಗುತ್ತದೆ. ಹೀಗಾಗಿ, ರಾಜಕೀಯ ಪಕ್ಷಗಳ ವಿರುದ್ಧ ಈ ವರ್ಗ ತೀವ್ರ ಅಸಮಾಧಾನ ಹೊರಹಾಕಲಾರಂಭಿಸಿದೆ.
- ಶ್ರೀಕಾಂತ್ ಭಟ್