ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಹೆಚ್ಚಳ: ಆರೋಪ

Lingaraj Badiger
Updated On : 30 Jan 2014, 10:31 am

ಶಿವಮೊಗ್ಗ: ನ್ಯಾ.ಸದಾಶಿವ ಆಯೋಗ ವರದಿ ಜಾರಿಗೆ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಹಾಗೂ ಜಿಲ್ಲೆಯಲ್ಲಿ ದೌರ್ಜನ್ಯ ತಡೆ ಕಾಯ್ದೆ ಸಂಪೂರ್ಣವಾಗಿ ಪಾಲಿಸುತ್ತಿಲ್ಲವಾದ್ದರಿಂದ ಪರಿಶಿಷ್ಟರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಬುಧವಾರ ಪ್ರತಿಭಟನೆ ನಡೆಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದ ಸಮಿತಿಯ ಸದಸ್ಯರು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಠಾಣೆಯಲ್ಲೇ ರಾಜಿ: ಪರಿಶಿಷ್ಟ ಜಾತಿಯವರ ರಕ್ಷಣೆಗೆ ಮುಂದಾಗಬೇಕಾಗಿರುವ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಇಂದು ಪದೇ ಪದೆ ದೌರ್ಜನ್ಯಗಳು ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಇದು ಪೊಲೀಸ್ ಠಾಣೆಯಲ್ಲೇ ರಾಜಿ ಪಂಚಾಯಿತಿ ಮೂಲಕ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸೊರಬ, ಆನವೇರಿ ದೌರ್ಜನ್ಯ ಪ್ರಕರಣಗಳು ಬಹಳ ಗಂಭೀರವಾಗಿರುವುದರಿಂದ ಸಂಬಂಧಪಟ್ಟ ಆರೋಪಿಗಳ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಬೇಕು. ಗಾಯಾಳುಗಳಾದ ನಟರಾಜ, ಸತೀಶ, ಅಣ್ಣಪ್ಪ, ರಂಗೇಶ ಅವರ ಕುಟುಂಬಕ್ಕೆ ರಕ್ಷಣೆ ನೀಡಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಆನವೇರಿಯಲ್ಲಿ  ಜಾತಿ- ಜಾತಿಗಳ ಮಧ್ಯೆ ವೈಷಮ್ಯ ಹುಟ್ಟಿಹಾಕುವಂತಹ ಕೋಮುಭಾವನೆಯನ್ನು ಹೊಂದಿರುವವರನ್ನು ಗಡಿ ಪಾರು ಮಾಡಿ ಗ್ರಾಮದಲ್ಲಿ ಸೌಹಾರ್ದತಾ ಭಾವನೆ ಬೆಳೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಸಮಾಧಾನ: ಮಾದಿಗ ಸಮುದಾಯವನ್ನು ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸುವುದಾಗಿ ಸಮಿತಿ ಸದಸ್ಯರು ತಿಳಿಸಿದರು. ಸಾಮಾಜಿಕ ನ್ಯಾಯದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಸಿದ್ದರಾಮಯ್ಯನವರ ಸರ್ಕಾರ ಮಾದಿಗರ ಸಾಮಾಜಿಕ ನ್ಯಾಯ ಜಾರಿಗೊಳಿಸಲು ತುಟಿ ಬಿಚ್ಚುತ್ತಿಲ್ಲವೇಕೆ ಎಂದು ಪ್ರಶ್ನಿಸಿದರಲ್ಲದೇ, ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ವಿರೋಧಿಸುವವರ ಒಡಲಾಳದಲ್ಲಿ ಮಾದಿಗ ಜನಾಂಗ ವಿರೋಧಿ ಮನಸ್ಸುಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದರು.
ಯಾವ ಪ್ರಜಾಪ್ರಭುತ್ವ: ಮಾದಿಗ ಜನಾಂಗದ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸುತ್ತಾ ರಾಜ್ಯಾದ್ಯಂತ ಈ ಸಮುದಾಯವನ್ನು ನಿರ್ಲಕ್ಷಿಸಲಾಗುತ್ತಿದೆ. ಕಣ್ಣಿಗೆ ರಾಚುವಂತೆ ಚುನಾವಣೆಯಲ್ಲಿ ಗೆದ್ದುಬಂದ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ. ಸರ್ಕಾರದಿಂದ ರಚನೆಗೊಂಡ ಒಂದು ಆಯೋಗ ವರದಿ ಸರ್ಕಾರವೇ ಬಹಿರಂಗಗೊಳಿಸಲು ಯಾವ ಕಾನೂನಾತ್ಮಕ ತೊಡಕುಗಳಿಲ್ಲ. ಆಯೋಗದ ವರದಿಯನ್ನು ಅಂಗೀಕರಿಸುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟಿರುವ ವಿಷಯ. ಆದರೆ ವರದಿ ಚರ್ಚೆಗೂ ಬಿಡದೆ ಅಂಗೀಕರಿಸಲು ಬಿಡುವುದಿಲ್ಲವೆಂದರೆ ಇದು ಯಾವ ಪ್ರಜಾಪ್ರಭುತ್ವದ ಸರ್ಕಾರ ಎಂದರು.
ಗಂಗಾಧರ, ಭಾನುಪ್ರಸಾದ್, ರಂಗನಾಥ್, ಮಲ್ಲೇಶ್, ನಾಗರಾಜ್, ಸಂಜೀವ್‌ಕುಮಾರ್ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement