ನಗರಾಭಿವೃದ್ಧಿಗೆ ಒಕ್ಕೊರಲ ಆಗ್ರಹ
ಕ.ಪ್ರ.ವಾರ್ತೆ, ಶಿವಮೊಗ್ಗ , ಜ.29
ಪಾರ್ಕ್‌ಗಳು ಅಭಿವೃದ್ಧಿಯಾಗಿಲ್ಲ, ರಸ್ತೆಗಳು ಗುಂಡಿ ಬಿದ್ದಿವೆ, ಪಾದಚಾರಿ ಮಾರ್ಗಗಳು ಸಾಕಷ್ಟಿಲ್ಲ, ಬಸ್ಸು ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲ, ಸಂಪೂರ್ಣ ಗಣಕೀಕರಣ ಆಗಿಲ್ಲ, ಈ ಬಾರಿಯಾದರೂ ನಗರ ಪಾಲಿಕೆ ಬಜೆಟ್‌ನಲ್ಲಿ ಶಿವಮೊಗ್ಗ ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ಸಿಗಲಿ...
ನಗರದ ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ನಾಗರಿಕರಿಂದ ಸಲಹೆಗಳ ಮಹಾಪೂರವೇ ಹರಿದು ಬಂತು.
ಮಾತಿನ ಚಕಮಕಿ: ಕೆಲವರು ಪಾಲಿಕೆ, ಪಾಲಿಕೆ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಮಾತಿನ ಚಕಮಕಿಯೂ ನಡೆದವು. ನೀವು ಮಾಡಿರುವ ಕೆಲಸಗಳ ಲೆಕ್ಕ ಕೊಡಿ ಎಂದು ಕೇಳಿದ್ದೂ ನಡೆಯಿತು. ನಡುನಡುವೆ ಕೆಲವು ಮೌಲಿಕ ಸಲಹೆಗಳೂ ಹೊರಹೊಮ್ಮಿದವು.
ಮಹಾಪೌರ ಖುರ್ಷಿದಾ ಬಾನು ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಬಹುತೇಕ ನಾಗರಿಕರು ಸ್ವಚ್ಛತೆಯ ಬಗ್ಗೆಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಾಂಚಲ ಶಿವಪ್ಪನಾಯಕ ಸೇನೆಯ ಭದ್ರಾವತಿ ವಾಸು, ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲವೇ ಇಲ್ಲ. ಇಲ್ಲಿ ಸಾಕಷ್ಟು ಕಸದ ಬುಟ್ಟಿಗಳನ್ನು ಇಡಬೇಕು. ರಸ್ತೆ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕೆಲಸ ಆಗುತ್ತಿಲ್ಲ. ಜೆಸಿಬಿ ಯಂತ್ರಗಳ ಬೇಡಿಕೆ ಸಾಕಷ್ಟಿದ್ದು ಇನ್ನಷ್ಟು ಖರೀದಿಸಿ ಎಂದರು.
ಆನ್‌ಲೈನ್ ಪಾವತಿ: ನಾಗರಿಕ ಹಿತರಕ್ಷಣಾ ವೇದಿಕೆಯ ಕೆ.ವಿ. ವಸಂತಕುಮಾರ್, ಆಸ್ತಿ ತೆರಿಗೆಯನ್ನು ಆನ್ ಲೈನ್ ನಲ್ಲಿ ಪಾವತಿಸಲು ಅವಕಾಶ ಮಾಡಿಕೊಡಿ, ಶಿವಮೊಗ್ಗ ನಗರ ಪ್ರವೇಶಿಸುವ ರಸ್ತೆಗಳಲ್ಲಿ ಹಸುರೀಕರಣ ಆಗಿಲ್ಲ. ಪಾಸ್ಟಿಕ್ ನಿರ್ಮೂಲನೆ ಯೋಜನೆ ಸಮರ್ಪಕವಾಗಿ ಜಾರಿ ಆಗಿಲ್ಲ. ಕೆಲವು ಬಡಾವಣೆಗಳಲ್ಲಿ ಮೂಲಸೌಕರ್ಯಗಳೇ ಇಲ್ಲ. ಫ್ಲೆಕ್ಸ್ ಹಾವಳಿ ಮಿತಿ ಮೀರಿದ್ದು, ಇವಕ್ಕೆ ಗರಿಷ್ಠ ಬಾಡಿಗೆ ವಿಧಿಸಿ ಎಂದರು.
ಕೆಲವು ಬಹುಮಹಡಿ ಕಟ್ಟಡಗಳಲ್ಲಿ ಪಾರ್ಕಿಂಗ್ ಸ್ಥಳಾವಕಾಶ ಇಲ್ಲ. ಸೆಲ್ಲಾರ್‌ಗಳಲ್ಲಿ ಆಸ್ಪತ್ರೆಗಳು ತೀವ್ರ ನಿಗಾ ಘಟಕ ಸ್ಥಾಪಿಸಿದರೆ, ಇನ್ನೂ ಕೆಲವೆಡೆ ಹೋಟೆಲ್‌ಗಳು ನಡೆಯುತ್ತಿವೆ. ಈ ಬಗ್ಗೆ ತೀವ್ರ ಕ್ರಮ ಕೈಗೊಳ್ಳಿ ಎಂದರು.
ಕಾಂಗ್ರೆಸ್ ಮುಖಂಡ ರುದ್ರೇಶ್, ಜೆನರ್ಮ್ ಯೋಜನೆಯಡಿ ಇನ್ನಷ್ಟು ಸಿಟಿಬಸ್ ಗಳು ಬರುತ್ತಿದ್ದು, ಪಾಲಿಕೆ ಕೂಡಲೇ ಬಸ್ಸು ನಿಲ್ದಾಣಕ್ಕಾಗಿ ರಸ್ತೆ ವಿಸ್ತರಣೆ ಮಾಡಬೇಕು. ಇಲ್ಲದಿದ್ದರೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಪಾದಚಾರಿ ಮೇಲುಸೇತುವೆಗಳನ್ನು ನಿರ್ಮಿಸಿ ಎಂದರು.
ನಾಮಫಲಕ ಅಳವಡಿಸಿ: ಬಿಂದು ಕುಮಾರ್, ಪಾಲಿಕೆ ಜಾಗಗಳನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸುತ್ತಿದ್ದಾರೆ. ಮೊದಲು ಜಾಗ ಗುರುತಿಸುವ ಕೆಲಸ ಮಾಡಿ. ಅಲ್ಲಿ ನಾಮಫಲಕ ಅಳವಡಿಸಿ ಎಂದರು. ಪಾಲಿಕೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಫಲಕ ಅಳವಡಿಸಿ ಎಂದು ಒತ್ತಾಯಿಸಿದರು.
ಅಶೋಕ್ ಯಾದವ್ ಅವರು ಮಹಿಳಾ ಶೌಚಾಲಯ ಕೊರತೆ ಬಗ್ಗೆ ಗಮನ ಸೆಳೆದು, ಈ ಬಗ್ಗೆ ಬಜೆಟ್ ನಲ್ಲಿ ಯೋಜನೆ ರೂಪಿಸಿ ಎಂದರು. ಗುಡ್ ಡೆಕಲ್ ದೇವಸ್ಥಾನದ ಬಳಿ ಇರುವ ಸ್ಮಶಾನ ಜಾಗವನ್ನು ದೇವಸ್ಥಾನದವರು ಅತಿಕ್ರಮಿಸುತ್ತಿದ್ದು, ಇದನ್ನು ರಕ್ಷಿಸಿ ಎಂದರು.
ವರ್ತಕ ಸಂದೀಪ್, ವಾಣಿಜ್ಯ ಕಟ್ಟಡಗಳಿಗೆ ಯಾರೂ ಬಾಡಿಗೆ ಬರುತ್ತಿಲ್ಲ. ಅಂಡರ್‌ಪಾಸ್ ಜನರ ಬಳಕೆಗೆ ಸಿಕ್ಕಿಲ್ಲ. ಅಮೀರ್ ಅಹ್ಮದ್ ವೃತ್ತದ ಗುಂಡಿಗಳನ್ನು ಮುಚ್ಚಿಲ್ಲ ಎಂದು ದೂರಿದರು.
ಉಪಮಹಾಪೌರರಾದ ರೇಖಾ ಚಂದ್ರಶೇಖರ್, ಸದಸ್ಯರಾದ ಎಚ್.ಸಿ. ಯೋಗೀಶ್, ರಾಜಶೇಖರ್, ಮಂಜುನಾಥ್, ಐಡಿಯಲ್ ಗೋಪಿ ಸೇರಿದಂತೆ ಹಲವು ಸದಸ್ಯರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.