ಫೆ.1ರಂದು ಜಿಲ್ಲಾ ಕೇಂದ್ರಗಳಲ್ಲಿ ಧರಣಿ
ಶಿವಮೊಗ್ಗ: ವಿಧಾನಸಭೆಯಲ್ಲಿ ಮಂಡನೆಯಾದ ಕರ್ನಾಟಕ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವೇತನ, ನಿವೃತ್ತಿ ವೇತನ, ಭವಿಷ್ಯ ನಿಧಿ ಇತರೆ ಸೌಲಭ್ಯಗಳ ನಿಯಂತ್ರಣ ವಿಧೇಯಕ-2014 ಮಸೂದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಫೆ.1ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಎಲ್ಲಾ ಜಿಲ್ಲಾ ಕೆಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಆಯಾ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದೆ.
ಈ ವಿಷಯವನ್ನು ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಡಾ.ಕೆ.ಎಚ್.ಕುಮಾರಸ್ವಾಮಿ ಹಾಗೂ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ.ಬಾಲಕೃಷ್ಣ ಹೆಗಡೆ, ಸಂಘದ ಮನವಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ರಾಜ್ಯದಲ್ಲಿನ ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆ, ಪ.ಪೂ.ಕಾಲೇಜು, ಪದವಿ ಕಾಲೇಜು, ಐಟಿಐ, ಡಿಪ್ಲೊಮಾ ಕಾಲೇಜುಗಳ ಎಲ್ಲ ಸಿಬ್ಬಂದಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಕೋರ್ಟ್ ತೀರ್ಪಿನ ಉಲ್ಲಂಘನೆ: ರಾಜ್ಯದಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುದಾನಕ್ಕೊಳಪಟ್ಟಿದ್ದು, ಅನುದಾನ ರಹಿತ ಅವಧಿಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳಿಗೆ ಕಾಲಮಿತಿ ಬಡ್ತಿ, ವೇತನ, ಪಿಂಚಣಿ ಸೌಲಭ್ಯ, ಹಾಗೂ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಉಚ್ಚ ನ್ಯಾಯಾಲಯ ಆದೇಶ ನೀಡಿದ್ದರೂ ಸರ್ಕಾರ ನ್ಯಾಯಾಲಯದ ಸೂಚನೆಗೆ ಮಾನ್ಯತೆ ನೀಡದೆ ಅನುದಾನಿತ ನೌಕರರಿಗೆ ಮಾರಕವಾಗುವ ವಿಧೇಯಕ ಮಂಡಿಸಿರುವುದು ದುರದೃಷ್ಟಕರ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ, ಜಿಲ್ಲಾ ಸಂಚಾಲಕ ಅಮೀರ್ ಜಾನ್, ಖಜಾಂಚಿ ಯೋಗೀಶ್, ಉಪಾಧ್ಯಕ್ಷಮರುಳಸಿದ್ಧಾರಾಧ್ಯ, ಕುಮಾರ, ಮಂಜುನಾಥಸ್ವಾಮಿ, ಸತೀಶ್, ಧನಪಾಲ್ ರಾಠೋಡ್, ತಿಪ್ಪೇಶ ಮಂಜಾನಾಯ್ಕ್, ಇದ್ದರು.