ಬೆಂಗಳೂರಿಗೆ ಮರಳು ಸಾಗಾಟಕ್ಕೆ ವಿರೋಧ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.29
ನಿರ್ಮಾಣ ಹಂತದ ಶಿವಮೊಗ್ಗ ಜಿಲ್ಲೆಯ ಕಟ್ಟಡಗಳಿಗೆ ಮರಳು ಸಾಗಿಸುವ ಲಾರಿಗಳು ಬುಧವಾರ ಬೀದಿಗಿಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡವು.
ಮರಳು ಸಾಗಾಣಿಕೆ ಅವ್ಯವಸ್ಥೆ ವಿರೋಧಿಸಿ ಶಿವಮೊಗ್ಗ ಕಟ್ಟಡ ಸಾಮಗ್ರಿ ಸರಬರಾಜು ಲಾರಿ ಮಾಲಿಕರ ಸಂಘದ ಸದಸ್ಯರು ಲಾರಿ ಸಹಿತ ಪ್ರತಿಭಟನೆ ಕೈಗೊಂಡರು. ಇಲ್ಲಿನ ಸೈನ್ಸ್ ಮೈದಾನದಿಂದ ಆಗಮಿಸಿದ ಪ್ರತಿಭಟನಾಕಾರರು ಮಹಾವೀರ ವೃತ್ತದಲ್ಲಿ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಯವರಿಗೆ ಮನವಿ ಅರ್ಪಿಸಿದರು.
ಏನು ಸಮಸ್ಯೆ?: ಜಿಲ್ಲೆಯ ತೀರ್ಥಹಳ್ಳಿ, ಶಿವಮೊಗ್ಗ, ಭದ್ರಾವತಿ, ಹೊಸನಗರ ತಾಲೂಕುಗಳಲ್ಲಿ ಜಿಪಿಎಸ್ ಅಳವಡಿಸಿದ ಪರವಾನಗಿ ಪಡೆದು ಮರಳು ಸಾಗಿಸುವ ಸಲುವಾಗಿ ಸುಮಾರು 1400 ಲಾರಿಗಳು ಕಾರ್ಯನಿರ್ವಹಿಸುತ್ತಿವೆ. ಸರಿಸುಮಾರು 50 ಸಾವಿರ ಜನರು ಈ ವೃತ್ತಿಯ ಮೂಲಕ ಜೀವನ ಸಾಗಿಸುತ್ತಿದ್ದು, ಇದನ್ನೇ ಅವಲಂಬಿಸಿದ್ದಾರೆ.
ಎರಡು ತಿಂಗಳಿನಿಂದ ವಾರಕ್ಕೆ ಒಂದೋ ಎರಡೋ ಪರವಾನಗಿ ಲೋಕೋಪಯೋಗಿ ಇಲಾಖೆಯಿಂದ ಸಿಗುತ್ತಿದ್ದು, ಇದರಿಂದ ಅರೆಬರೆ ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಲಾರಿ ಮಾಲಿಕರು, ಸಿಬ್ಬಂದಿ ಅಳಲು ತೋಡಿಕೊಂಡರು.
ಮರಳು ಸಾಗಣೆ ಸ್ಥಗಿತ: ದಿನನಿತ್ಯ ಲೋಕೋಪಯೋಗಿ ಇಲಾಖೆಯಿಂದ ಹೋರಾಟ ಮಾಡುವ ಮೂಲಕ ಪರವಾನಗಿ ಪಡೆದು, ಲೋಕೋಪಯೋಗಿ ಇಲಾಖೆಯಿಂದ ನಿರ್ಧರಿಸಿದ 6 ಸಿಎಂಟಿಆರ್ ಮರಳನ್ನು ಪಡೆದು ಸಾಗಿಸಲಾಗುತ್ತಿದೆ. ಈ ನಿರ್ದಿಷ್ಟ 4 ಸ್ಥಳಗಲ್ಲಿ ಈಗಾಗಲೇ ಮರಳು ಖಾಲಿಯಾಗಿದ್ದು, ಅಲ್ಲಿ ಸಿಗುವ ಕಲ್ಲು, ಮಣ್ಣನ್ನು ತಂದು ಸಾರ್ವಜನಿಕರಿಗೆ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮರಳು ಸಾಗಾಣಿಕೆ ಸ್ಥಗಿತಗೊಳಿಸಿರುವುದಾಗಿ ಸಂಘಟನೆಯ ಅಧ್ಯಕ್ಷ ರಾಜಶೇಖರ್ ತಿಳಿಸಿದರು.
ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ಸುತ್ತೋಲೆಯೊಂದು ಹೊರಟಿದ್ದು, ಜಿಲ್ಲೆಯಿಂದ ಪ್ರತಿ ನಿತ್ಯ 100 ವಾಹನಗಳಷ್ಟು ಮರಳನ್ನು ಬೆಂಗಳೂರಿಗೆ ಸಾಗಿಸಲು ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ. ಈ ಆದೇಶ ಲಾರಿ ಮಾಲಿಕರನ್ನು ದಿಗ್ಭ್ರಾಂತರನ್ನಾಗಿಸಿದೆ. ಜಿಲ್ಲೆಯ ಲಾರಿ ಮಾಲಿಕರ ಹಿತ ಕಾಯುವ ಬದಲು ಜಿಲ್ಲಾಡಳಿವು ರಾಜ್ಯಸರ್ಕಾರದ ಸೂಚನೆಯಂತೆ 100 ವಾಹನ ಮರಳನ್ನು ಸಾಗಿಸಲು ಕೈಗೊಂಡ ತೀರ್ಮಾನ ಸರ್ವಾಧಿಕಾರಿ ಧೋರಣೆ ಎಂದು ರಾಜಶೇಖರ್ ಟೀಕಿಸಿದರು.
ಶಿವಮೊಗ್ಗ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಾಕಾಗದ ಮರಳು ಶಿವಮೊಗ್ಗ ಜಿಲ್ಲೆಯ ಲಾರಿ ಮಾಲಿಕರಿಗೆ ಸಾಕಾಗದೇ ಇರುವ ಮರಳು, ಶಿವಮೊಗ್ಗ ಲಾರಿ ಮಾಲಿಕರಿಗೆ ತೃಪ್ತಿಪಡಿಸಲಾಗದ ಜಿಲ್ಲಾಡಳಿತ, ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಮಣಿದು ಬೆಂಗಳೂರಿನ ಲಾರಿ ಮಾಲಿಕರಿಗೆ ಮರಳನ್ನು ಕೊಟ್ಟದ್ದೇ ಆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದರು.
ಮರಳು ಖಾಲಿ: ಸದ್ಯ ಪರವಾನಗಿ ನೀಡುತ್ತಿದ್ದ ಮಹಿಷಿ, ದಬ್ಬಣಗದ್ದೆ, ಬಾಳಗಾರು, ಬಗ್ಗೋಡಿಗೆ ಸ್ಥಳಗಳಲ್ಲಿ ಮರಳು ಈಗಾಗಲೇ ಖಾಲಿಯಾಗಿದೆ. ಬೇರೆ ಸ್ಥಳಗಳಾದ ಹುಣಸವಳ್ಳಿ, ಮಾಳೂರು, ನಂಬಳ, ಮುಂಡವಳ್ಳಿ, ತೂದೂರು, ಗಬಡಿ, ಹೆದ್ದೂರು, ಹೊಳೆಕೊಪ್ಪದಲ್ಲಿ ನೀರು ಕಡಿಮೆಯಾಗಿದ್ದು ಮರಳು ತುಂಬಲು ಸಮಸ್ಯೆ ಇರುವುದಿಲ್ಲ. ಆದ್ದರಿಂದ ಕೂಡಲೇ ಈ ಸ್ಥಳಗಳಲ್ಲಿ ಮರಳು ಸಾಗಾಣಿಕೆ ಲಾರಿಗಳಿಗೆ ಪ್ರತಿ ದಿನಕ್ಕೆ 1 ಪರವಾನಗಿ ನೀಡುವ ವ್ಯವಸ್ಥೆ ಜಾರಿಗೆ ತರುವಂತೆ ಆಗ್ರಹಿಸಿದರು.