ಮಕ್ಕಳಿಗೆ ಸಾಹಿತ್ಯ, ಸಂಸ್ಕೃತಿ ಅರಿವು ಅಗತ್ಯ
ಕ.ಪ್ರ.ವಾರ್ತೆ, ಸಾಗರ, ಜ.29
ಸಾಹಿತ್ಯ, ಸಂಸ್ಕೃತಿಯ ಸಾಮೀಪ್ಯವಿಲ್ಲದ ಮಕ್ಕಳು ಸಮಾಜ ವಿರೋಧಿಯಾಗಿ ಬೆಳೆಯುತ್ತಾರೆ ಎಂದು ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಪ್ರಾಧ್ಯಾಪಕ ಡಾ. ಪ್ರಭಾಕರ ರಾವ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಕ್ಕಳ ಎರಡನೇ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಹಿತ್ಯ, ಸಂಸ್ಕೃತಿ ವ್ಯಕ್ತಿತ್ವವನ್ನು ಪ್ರಭಾವಿಸುತ್ತದೆ ಎಂದು ಹೇಳಿದರು.
ವ್ಯಕ್ತಿತ್ವದಲ್ಲಿ ಬದಲಾವಣೆ: ಮಗು ಹುಟ್ಟಿದಾಗಲೇ ಸಂಗೀತ, ಕತೆ ಕೇಳುವುದು, ಚಿತ್ರ ಬಿಡಿಸುವುದರಲ್ಲಿ ಆಸಕ್ತಿ ಹೊಂದಿರುತ್ತದೆ. ಅಮ್ಮ ಹೇಳುವ ಜೋಗುಳ, ಅಜ್ಜ-ಅಜ್ಜಿ ಹೇಳುವ ಕತೆ ಮಕ್ಕಳಿಗೆ ಇಷ್ಟವಾಗುತ್ತದೆ. ಆದರೆ ಬೆಳೆಯುತ್ತಾ ಪರಿಸರದ ಪ್ರಭಾವದಿಂದ ಮಗುವಿನ ವ್ಯಕ್ತಿತ್ವದಲ್ಲಿ ಬದಲಾವಣೆಯಾಗುತ್ತದೆ. ಈ ನೆಲೆಯಲ್ಲಿ ನಾವು ಮಗುವಿಗೆ ಉತ್ತಮ ಪರಿಸರದ ಸಂಪರ್ಕ ಒದಗಿಸಬೇಕು.
ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ಬದುಕನ್ನು ಕಟ್ಟಿಕೊಡುತ್ತದೆ. ಕಲೆ, ಸಂಗೀತ ಜನಾಂಗವನ್ನು ಸದೃಢಗೊಳಿಸುತ್ತದೆ. ಆದರೆ ಇಂದಿನ ಮಕ್ಕಳ ಕೈಗೆ ನಾವು ಮೊಬೈಲ್, ಕಂಪ್ಯೂಟರ್, ಟಿ.ವಿ. ಕೊಡುತ್ತಿದ್ದೇವೆ. ಇವು ಮಗುವಿನ ವ್ಯಕ್ತಿತ್ವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದರು.
ಸಮುದಾಯ ಅಗತ್ಯ: ಟಿ.ವಿ. ಮೊಬೈಲ್ ಜೊತೆ ಮಕ್ಕಳು ಏಕಾಂಗಿಯಾಗಿ ಕಳೆಯುತ್ತಾರೆ. ಆದರೆ ಸಾಹಿತ್ಯ, ಸಂಸ್ಕೃತಿ ಚಟುವಟಿಕೆಯಲ್ಲಿ ಇಡೀ ಸಮುದಾಯ ಪಾಲ್ಗೊಳ್ಳುತ್ತದೆ. ಮಕ್ಕಳು ಸಾಹಿತ್ಯ, ಸಂಸ್ಕೃತಿಯ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಸಾಮಾಜಿಕರಣೊಗಲ್ಳುತ್ತಾರೆ. ಆದ್ದರಿಂದ ಪೋಷಕರು ಮಕ್ಕಳ ಮೇಲೆ ಇಲ್ಲದ ಒತ್ತಡ ಹೇರದೆ ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ವಿ.ಟಿ. ಸ್ವಾಮಿ, ಸಮ್ಮೇಳನದ ಸರ್ವಾಧ್ಯಕ್ಷ ಅನೀಶ್ ಶರ್ಮ ಮೊದಲಾದವರು ಇದ್ದರು. ಬೆಳಗಿನಿಂದ ವಿಚಾರ ಗೋಷ್ಠಿ, ಕವಿಗೋಷ್ಠಿ ನಡೆಯಿತು.
ವಿಚಾರಗೋಷ್ಠಿಯಲ್ಲಿ ಮಕ್ಕಳೇ ವಿಚಾರ ಮಂಡಿಸಿ ಪ್ರತಿಕ್ರಿಯಿಸಿದ್ದು, ಸಮ್ಮೇಳನಕ್ಕೆ ಅರ್ಥ ತಂದುಕೊಟ್ಟಿತ್ತು. ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವೇದಿಕೆಯಲ್ಲಿ ಪಾಲ್ಗೊಂಡಿದ್ದು, ಸಮ್ಮೇಳನಕ್ಕೆ ಸಾರ್ಥಕತೆ ತಂದುಕೊಟ್ಟಿತ್ತು.