ಅಂಕ ಆಧಾರಿತಕ್ಕಿಂತ ಮೌಲ್ಯಿಕ ಶಿಕ್ಷಣ ಮುಖ್ಯ
ತರೀಕೆರೆ: ಮೆದುಳು, ಹೃದಯ ಮತ್ತು ಕೈಗೆ ಬಲ ನೀಡುವ ಶಿಕ್ಷಣದ ಅವಶ್ಯಕತೆ ಇದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಕುಂದನ್ ಬಸವರಾಜ್ ತಿಳಿಸಿದರು.
ಪಟ್ಟಣದ ಎಸ್ಜೆಎಂ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯಡಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಕಾಲೇಜು ಸಭಾಂಗಣದಲ್ಲಿ ನಡೆದ ವಿಶ್ವ ವಿದ್ಯಾನಿಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಿನ ಶಿಕ್ಷಣ ಕೇವಲ ಮೆದುಳಿಗೆ ಮಾತ್ರ ನೀಡುತ್ತಿದ್ದೇವೆ. ಅಂದರೆ ಪರೀಕ್ಷಾ ದೃಷ್ಟಿಯಿಂದ ವಿಷಯಗಳ ಬೋಧನೆಯನ್ನು ತಲೆಯಲ್ಲಿ ತುಂಬುತ್ತಿದ್ದೇವೆ. ಆದರೆ, ಮೌಲ್ಯಿಕ ಶಿಕ್ಷಣದ ಮೂಲಕ ಹೃದಯಕ್ಕೆ ಬಲ ನೀಡುವ ಶಿಕ್ಷಣ ನೀಡಬೇಕಾಗಿದೆ. ಕೈಗೆ ದುಡಿಮೆಯನ್ನು, ಆರ್ಥಿಕ ಸ್ವಾತಂತ್ರ್ಯ ಕಲ್ಪಿಸಿಕೊಡುವ ಶಿಕ್ಷಣ ನೀಡಬೇಕಾಗಿದೆ ಎಂದರು. ಪ್ರಾಚಾರ್ಯ ಪ್ರೊ. ಕೆ.ವಿ.ಸಜ್ಜನ ಶೆಟ್ಟರ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆ ಹೊರತರಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೆ, ದೊಡ್ಡ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ದಾರಿಯಾಗುತ್ತದೆ ಎಂದು ತಿಳಿಸಿದರು. ಜಾನಪದ ಗೀತೆ, ಭಾವಗೀತೆ ಏಕಪಾತ್ರಾಭಿನಯ, ರಂಗೋಲಿ ಸ್ಪರ್ಧೆ, ಚಿತ್ರಕಲೆ, ಪ್ರಹಸನ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಸ್ಜೆಎಂ ಮತ್ತು ಸ.ಪ್ರ. ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಪ್ರೊ. ಜಿ.ಎನ್. ಬಸವರಾಜಪ್ಪ, ಡಾ. ಆರ್.ವಿ. ಹೆಗಡಾಳ್, ಪ್ರೊ. ಕೆ.ಆರ್. ವೀರೇಶ್, ಪ್ರೊ. ಪಿ.ಲಿಂಗಪ್ಪ, ಪ್ರೊ. ಚಿದಾನಂದಪ್ಪ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ವಿಜೇತರಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಯಿತು.
ರಾ.ಸೇ. ಯೋಜನಾಧಿಕಾರಿ ಪ್ರೊ. ಬಿ.ಆರ್.ಡಮ್ಮಳ್ಳಿ, ಪ್ರೊ. ಟಿ.ಎನ್. ರಜಪೂತ, ಮಂಜುಳ, ಸ್ವಾತಿ ಎಸ್.ರಾವ್, ವಿನುತಾ ಭಾಗವಹಿಸಿದ್ದರು.