ಸೌಕರ್ಯ ಕಲ್ಪಿಸುವುದೇ ಸ್ಥಳೀಯ ಸಂಸ್ಥೆ ಉದ್ದೇಶ: ರೇಖಾ
ಕ.ಪ್ರ.ವಾರ್ತೆ, ತರೀಕೆರೆ, ಜ.30
ಜನರ ಮತ್ತು ಸರ್ಕಾರದ ಮಧ್ಯೆ ಸೇತುವೆಯಾಗಿ ಕೆಲಸ ಮಾಡುವುದು ಜನಪ್ರತಿನಿಧಿಗಳ ಕೆಲಸ ಎಂದು ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ತಿಳಿಸಿದ್ದಾರೆ.
ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆ ವತಿಯಿಂದ ಏರ್ಪಡಿಸಿದ್ದ ಪಂಚಾಯತ್ರಾಜ್ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪಂಚಾಯತ್ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಹಂತಗಳಿವೆ. ಈ ಮೂರರಲ್ಲಿ ಗ್ರಾಪಂ ಹೆಚ್ಚು ಅಧಿಕಾರ ಹೊಂದಿದ ಸ್ಥಳೀಯ ಸಂಸ್ಥೆ. ಜಿಲ್ಲೆಯಲ್ಲಿ 226 ಗ್ರಾ.ಪಂ.ಗಳಿವೆ. ಜನರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಇವುಗಳ ಪಾತ್ರ ಪ್ರಮುಖ ಎಂದು ಅವರು ತಿಳಿಸಿದರು.
ಮತದಾನ ಕರ್ತವ್ಯ: ಗ್ರಾ.ಪಂ.ಯಲ್ಲಿ ಚುನಾಯಿತ ಸದಸ್ಯರು 500 ಜನರನ್ನು ಪ್ರತಿನಿಧಿಸಿದರೆ, ತಾ.ಪಂ. 10000, ಜಿ.ಪಂ. 40000 ಜನರನ್ನು ಚುನಾಯಿತ ಪ್ರತಿನಿಧಿಗಳು ಪ್ರತಿನಿಧಿಸುತ್ತಾರೆ. ಮತದಾನ ಮಾಡುವುದು ಪ್ರತಿಯೊಬ್ಬನ ಕರ್ತವ್ಯ ಮತ್ತು ಜವಾಬ್ದಾರಿ. ಸುಸಂಸ್ಕೃತರಾದ, ವಿದ್ಯಾವಂತ ಚುನಾಯಿತ ಪ್ರತಿನಿಧಿಯಿಂದ ಮಾತ್ರ ದೇಶದ ಬದಲಾವಣೆ ಸಾಧ್ಯ ಎಂದು ತಿಳಿಸಿದರು.
ಅರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಮಹಿಳೆಯರನ್ನು ಮತ್ತು ಎಲ್ಲಾ ಜಾತಿ ಎಲ್ಲ ವರ್ಗದ ಜನರಿಗೂ ಅಧಿಕಾರ ಸಿಗಬೇಕು ಎಂಬ ಸದುದ್ದೇಶದಿಂದ 1985ರಲ್ಲಿ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರು ಮೀಸಲು ತಂದರು. ಇದರಿಂದಾಗಿ ಸಾಮಾನ್ಯ ವರ್ಗದವರಿಗೂ ಅಧಿಕಾರ ಸಿಕ್ಕಂತಾಗಿದೆ ಎಂದು ಅವರು ತಿಳಿಸಿದರು.
ಸಂಸ್ಥೆ ಕಾರ್ಯದರ್ಶಿ ಟಿ.ಜಿ.ಶಶಾಂಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆ ಸದಸ್ಯರಾದ ಈರಣ್ಣ, ಪದ್ಮರಾಜ್, ರಮೇಶ್, ಕಡೂರು ಮಹಿಳಾ ಬ್ಯಾಂಕ್ ಅಧ್ಯಕ್ಷೆ ಸವಿತಾ ಸತ್ಯನಾರಾಯಣ್ ಮಾತನಾಡಿದರು. ಗಿರೀಶ್, ಮುಖ್ಯಶಿಕ್ಷಕಿ ಎಚ್.ಆರ್. ಸುಜಾತ, ಶಾಲಾ ಮಕ್ಕಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.