ಇಂದಿನಿಂದ ಆಹಾರ ಖಾತ್ರಿ ಯೋಜನೆ ಜಾರಿ
ಕ.ಪ್ರ.ವಾರ್ತೆ ಶಿವಮೊಗ್ಗ ಜ.31
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ನಿಗದಿಪಡಿಸಿದ ಆಹಾರ ಧಾನ್ಯಗಳನ್ನು ನಿಗದಿತ ಅವಧಿಯಲ್ಲಿ ಪೂರೈಸಲು ಫೆ.1 ರಿಂದ ಆಹಾರ ಖಾತ್ರಿ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಿದೆ ಎಂದು ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯನ್ವಯ ತಿಂಗಳ ಮೊದಲ 10 ದಿನಗಳು ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ (ಮಧ್ಯಾಹ್ನದ ಊಟದ ವಿರಾಮವನ್ನು ಹೊರತುಪಡಿಸಿ) ಹಾಗೂ ನಂತರದ ದಿನಗಳಲ್ಲಿ ತಿಂಗಳ ಅಂತ್ಯದವರೆಗೆ ಬೆಳಗ್ಗೆ 8 ರಿಂದ 12 ರವರೆಗೆ, ಸಂಜೆ 4 ರಿಂದ 8 ರವರೆಗೆ ನ್ಯಾಯಬೆಲೆ ಅಂಗಡಿಗಳ ಬಾಗಿಲು ತೆರೆದು ಪಡಿತರ ವಿತರಿಸಲಾಗುತ್ತದೆ. ಮುಂದಿನ 6 ತಿಂಗಳ ಅವಧಿಯಲ್ಲಿ ಪಡಿತರ ವಿತರಣೆಯಲ್ಲಿ ಬಯೋವುಟ್ರಿಕ್ ವ್ಯವಸ್ಥೆ ಜಾರಿಗೊಳಿಸಲು ಯತ್ನಿಸಲಾಗುವುದು. ಈಸಂಬಂಧ ಪ್ರಕ್ರಿಯೆಗಳು ನಡೆದಿವೆ ಎಂದರು.
ಅಕ್ರಮಕ್ಕೆ ಕಡಿವಾಣ: ಬಿಪಿಎಲ್ ಕಾರ್ಡುದಾರರಿಗೆ 1 ಕೆ.ಜಿ.ಗೆ 1 ರುಪಾಯಿ ದರದಲ್ಲಿ ಅಕ್ಕಿ, ಗೋಧಿ ವಿತರಿಸಲಾಗುವುದು. ಪ್ರತಿ ಒಂದು ಯುನಿಟ್‌ಗೆ 8 ಕೆಜಿ ಅಕ್ಕಿ ಮತ್ತು 2 ಕೆಜಿ ಗೋಧಿ, 2 ಯುನಿಟ್‌ಗೆ 16 ಕೆಜಿ ಅಕ್ಕಿ ಮತ್ತು 4 ಕೆಜಿ ಗೋಧಿ ಹಾಗೂ 3 ಯುನಿಟ್‌ಗೆ ಹಾಗೂ ಮೇಲ್ಪಟ್ಟವರಿಗೆ 24 ಕೆಜಿ ಅಕ್ಕಿ ಮತ್ತು 6 ಕೆಜಿ ಗೋಧಿ ಇತರೊಂದಿಗೆ 13.50 ರುಪಾಯಿ ದರದಲ್ಲಿ ಪ್ರತಿ ಕಾರ್ಡಿಗೆ 1 ಕೆಜಿ ಸಕ್ಕರೆ ವಿತರಿಸಲಾಗುವುದು. ನಿಗದಿಪಡಿಸಿದ ಅವಧಿಯಲ್ಲಿ ಪಡಿತರ ವಿತರಿಸುವುದರಿಂದ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರ ಪಡೆಯುವರು.
ಇದರಿಂದಾಗಿ ಅಕ್ರಮ ಸ್ಥಗಿತಗೊಳ್ಳಲಿದೆ. ದಾಸ್ತಾನಿನಲ್ಲಿ ಏರುಪೇರುಗಳಾಗದಂತೆ ಎಚ್ಚರಿಕೆ ವಹಿಸಬಹುದಾಗಿದೆ ಎಂದು ವಿವರಿಸಿದರು.
ಪರಿಶೀಲನೆ: ಪ್ರತಿ ತಾಲೂಕಿನಲ್ಲಿ 5 ನ್ಯಾಯಬೆಲೆ ಅಂಗಡಿಗಳಲ್ಲಿ ಫೆ.1ನೇ ತಾರೀಖಿನಂದು ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಣೆ ಮಾಡುವ ಬಗ್ಗೆ ನೋಡಲ್ ಅಧಿಕಾರಿಗಳು ಪರಿಶೀಲನೆ ನಡೆಸಿ, ವರದಿ ಸಲ್ಲಿಸಲಿದ್ದಾರೆ ಎಂದ ಅವರು, ಆಹಾರ ಅದಾಲತ್ ಕಾರ್ಯಕ್ರಮದಂತೆ ಗ್ರಾಪಂ ಮಟ್ಟದಲ್ಲಿ ಎನ್‌ಆರ್‌ಇಜಿ ಯೋಜನೆಯ ನೋಡಲ್ ಅಧಿಕಾರಿಗಳನ್ನೆ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಈ ನೋಡಲ್ ಅಧಿಕಾರಿಗಳು ಫೆ.7 ರಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಹಾಜರಿದ್ದು, ಪಡಿತರ ಚೀಟಿದಾರರಿಗೆ ವಿತರಣೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.
ಮತದಾರರ ಕರಡು ಪಟ್ಟಿ ಪ್ರಕಟ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಕರಡು ಪಟ್ಟಿ ಪ್ರಕಟಗೊಂಡಿದೆ.
ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಹೊರತುಪಡಿಸಿ, ಉಳಿದ ಎಲ್ಲಾ ಕ್ಷೇತ್ರಗಳ ಮತದಾರರ ಕರಡುಪಟ್ಟಿಯನ್ನು ಸಾರ್ವಜನಿಕರ ವೀಕ್ಷಣೆಗಾಗಿ ಪ್ರಕಟಿಸಲಾಗಿದೆ ಎಂದರು.
ಪ್ರಸ್ತುತ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯೇ ಅಂತಿಮವಾದುದ್ದಲ್ಲ. ಸಾರ್ವಜನಿಕರು ಪ್ರಕಟಿತ ಈ ಪಟ್ಟಿ ವೀಕ್ಷಿಸಿ, ತಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಒಂದು ವೇಳೆ ಹೆಸರು ಪಟ್ಟಿಯಿಂದ ಕೈಬಿಟ್ಟಿದ್ದಲ್ಲಿ, ತಿದ್ದುಪಡಿಯಾಗಬೇಕಾಗಿದ್ದಲ್ಲಿ, ಅಥವಾ ಹೊಸದಾಗಿ ಸೇರ್ಪಡೆಗೊಳಿಸಬೇಕಾದಲ್ಲಿ ಮತ್ತು ಸ್ಥಳಾಂತರಗೊಳಿಸಬೇಕಾದಲ್ಲಿ ಮತದಾರರು ನಿಗದಿತ ನಮೂನೆಯಲ್ಲಿ ಹೆಸರನ್ನು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಪ್ರಕಟಿತ ಮತದಾರರ ಪಟ್ಟಿಯು ಅಂತರ್ಜಾಲ ತಾಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ ಎಂದ ಅವರು ಪುನರಾವರ್ತಿಯಾಗಿರುವ 1526 ಹೆಸರು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಗುರುತಿಸಲಾದ 1103 ಹೆಸರುಗಳನ್ನು ತಿದ್ದುಪಡಿಯೊಂದಿಗೆ ಪ್ರಕಟಿಸಲಾಗಿದೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಶಿವಮೊಗ್ಗ ಜಿಲ್ಲೆಯಲ್ಲಿ 6,64,345 ಪುರುಷರು, 6,56,932 ಮಹಿಳೆಯರು ಸೇರಿದಂತೆ ಒಟ್ಟು 13,21,277 ಮತದಾರರು ಈ ಬಾರಿ ಮತ ಚಲಾಯಿಸಲಿದ್ದಾರೆ.
ಅದಕ್ಕಾಗಿ ಜಿಲ್ಲೆಯಲ್ಲಿ 1704 ಮತಗಟ್ಟೆಗಳು ಹಾಗೂ ಬೈಂದೂರು ಕ್ಷೇತ್ರದಲ್ಲಿ 240 ಮತಗಟ್ಟೆಗಳು ಸೇರಿದಂತೆ ಒಟ್ಟು 1944 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.
ನಿರ್ಭೀತ ಮತ್ತು ಮುಕ್ತ ರೀತಿಯ ಚುನಾವಣೆ ನಡೆಯಲು ಜಿಲ್ಲಾಡಳಿತದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಈ ಬಾರಿಯ ಚುನಾವಣೆಯಲ್ಲಿ ವಿಶೇಷವಾಗಿ ಮತದಾರರು ತಮ್ಮ ವಿವೇಚನೆಯಂತೆ ಚುನಾವಣಾ ಆಯೋಗದ ನಿಯಮಾನುಸಾರ ತಿರಸ್ಕೃತ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ ಅರ್ಹ ಮತದಾರರೆಲ್ಲರೂ ಮತದಾನಕ್ಕೆ ಮುಂದಾಗಬೇಕು ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶೇ.85ರಷ್ಟು ಮತದಾನ ಮಾಡಿಸುವ ಗುರಿ ಹೊಂದಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ಉಪಸ್ಥಿತರಿದ್ದರು.