ಚರ್ಚೆಗೆ ಆಹ್ವಾನ: ಒಲ್ಲೆ ಎಂದ ಪ್ರಸನ್ನ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.31
ದೇಸಿ ಚಿಂತಕ ಪ್ರಸನ್ನ ಅವರು ಸಾಗರ ತಾಲೂಕು ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಕೈಮಗ್ಗ ಸತ್ಯಾಗ್ರಹ ನಿಮಿತ್ತ ಕೈಗೊಂಡಿರುವ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹವು ಶುಕ್ರವಾರ 2ನೇ ದಿನಕ್ಕೆ ಕಾಲಿಟ್ಟಿದೆ.
ಈ ನಡುವೆ ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಅವರು ಪತ್ರಿಕಾ ಹೇಳಿಕೆಯಲ್ಲಿ ಬಿಡುಗಡೆ ಮಾಡಿದ್ದು, ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟದ ಬೇಡಿಕೆಗಳನ್ನು ಸರ್ಕಾರವು ಸಹಾನುಭೂತಿಯಿಂದ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಒಕ್ಕೂಟದ ಬೇಡಿಕೆಗಳ ಬಗ್ಗೆ ಕೂಲಂಕಶವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸರ್ಕಾರದೊಂದಿಗೆ ಚರ್ಚೆಗೂ ಪ್ರಸನ್ನ ಅವರನ್ನು ಸಚಿವರು ಆಹ್ವಾನಿಸಿದ್ದಾರೆ. ಶ್ರಮಜೀವಿ ಆಶ್ರಮಕ್ಕೂ ಸಹ ತಮ್ಮ ಹೇಳಿಕೆ ತಲುಪಿಸಿದ್ದಾರೆ. ಆದರೆ ಪ್ರಸನ್ನ ಅವರು ನಿರಶನ ನಿಲ್ಲಿಸಲು ನಿರಾಕರಿಸಿದ್ದು, ಮುಖ್ಯ ಬೇಡಿಕೆಗಳ ಬಗ್ಗೆ ಸರ್ಕಾರ ಪ್ರಸ್ತಾಪಿಸಿಲ್ಲ ಎಂದಿದ್ದಾರೆ.
ವಿದ್ಯುತ್ ಮಗ್ಗ ಅಳವಡಿಕೆ ಬೇಡ: ಕೇಂದ್ರ ಸರ್ಕಾರವು ಕೈಮಗ್ಗ ಯಂತ್ರದ ವಿದ್ಯುದೀಕರಣ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ರಾಜ್ಯ ಸರ್ಕಾರವು ಕೈಮಗ್ಗ ನೇಕಾರಿಕೆ ಕ್ಷೇತ್ರಗಳಲ್ಲಿ ವಿದ್ಯುತ್ ಮಗ್ಗ ಅಳವಡಿಸುವ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕು ಎಂಬುದು ಇವರ ಪ್ರಮುಖ ಬೇಡಿಕೆಯಾಗಿತ್ತು.
ಆದರೆ ಸಚಿವರು, ಕೈಮಗ್ಗಗಳ ಸಾಂದ್ರತೆ ಹೆಚ್ಚಾಗಿರುವ ಕ್ಲಸ್ಟರ್ಗಳಲ್ಲಿ ಕೈಮಗ್ಗ ನೇಕಾರರಿಗೆ ತೊಂದರೆಯಾಗದಂತೆ ವಿದ್ಯುತ್ ಮಗ್ಗಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ ಸಮೀಕ್ಷೆ ನಡೆಸಿ ಮುಂದೆ ಪೂರಕ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಪಾರಂಪರಿಕ ಕೈಮಗ್ಗಗಳ ಯಾಂತ್ರೀಕರಣ ಪ್ರಕ್ರಿಯೆ ಸ್ಥಗಿತಗೊಳಿಸಿರುವುದರಿಂದ ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟದ ಪ್ರಮುಖ ಬೇಡಿಕೆಯು ಈಡೇರಿದಂತಾಗಿರುತ್ತದೆ ಎಂದಿರುವ ಅವರು, ಈ ಅಂಶಗಳನ್ನು ಪರಿಗಣಿಸಿ ಮತ್ತು ಕೈಮಗ್ಗ ಮತ್ತು ವಿದ್ಯುತ್ ನೇಕಾರರ ಹಿತದೃಷ್ಟಿಯಿಂದ ಕೂಡಲೇ ಸತ್ಯಾಗ್ರಹವನ್ನು ನಿಲ್ಲಿಸುವಂತೆ ಕೋರಿದ್ದಾರೆ.
ನಿಲ್ಲದ ನಿರಶನ: ಆದರೆ, ದೇಸಿ ಚಿಂತಕ ಪ್ರಸನ್ನ ಅವರು ನಿರಶನ ಕೈಬಿಡಲು ನಿರಾಕರಿಸಿದ್ದಾರೆ. ಕೈಮಗ್ಗ ಮೀಸಲಾತಿ ಅಧಿನಿಯಮವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಕೈಮಗ್ಗ ಬಟ್ಟೆಗಳ ಕಲಬೆರಕೆ ನಿಲ್ಲಬೇಕು ಎಂದು ಪಟ್ಟು ಹಿಡಿದ್ದಾರೆ.
ಶುಕ್ರವಾರವೂ ಸಹ ಪ್ರತಿಭಟನಾ ಸ್ಥಳದಲ್ಲಿ ರೈತ ಮುಖಂಡ ಕಡಿದಾಳು ಶಾಮಣ್ಣ, ಎಚ್.ಆರ್. ಬಸವರಾಜಪ್ಪ, ತೀರ್ಥಹಳ್ಳಿಯ ಶ್ರೀಧರ್ ಸೇರಿದಂತೆ ಹಲವರು ಭಾಗವಹಿಸಿದ್ದರು.