ನಿರುಪಯುಕ್ತ ಕೊಳವೆ ಬಾವಿಗಳಿಗೆ ಮುಚ್ಚಿಗೆ ಭಾಗ್ಯ!
ಸೊರಬ: ಬಾಲಕಿಯನ್ನು ಬಲಿ ತೆಗೆದುಕೊಂಡ ಕೊಳವೆಬಾವಿ ಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ಕಾಳಜಿ ವಹಿಸಿದ ಕನ್ನಡಪ್ರಭ ವರದಿಗೆ ಇಲ್ಲಿನ ಪಪಂ ಸ್ಪಂದಿಸಿದೆ.
ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿನ ನಿರುಪಯುಕ್ತ ಕೊಳವೆ ಬಾವಿಗಳನ್ನು ಪರಿಶೀಲಿಸಿ, ಮುಚ್ಚಿಸುವ ಕಾರ್ಯದಲ್ಲಿ ಪಪಂ ಆಡಳಿತ ತೀವ್ರ ನಿಗಾವಹಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇಲ್ಲಿನ ವಾರ್ಡ್‌ಗಳಲ್ಲಿ ಕುಡಿಯುವ ನೀರಿಗಾಗಿ ತೆಗೆದ ಕೊಳವೆ ಬಾವಿಗಳು ನಿರುಪಯುಕ್ತವಾದ ಬಳಿಕ ಕೊಳವೆಗೆ ಕ್ಯಾಪ್ ಹಾಕಿ ಬಿಡಲಾಗಿರುತ್ತದೆ, ಆದರೆ, ಈ ಕ್ಯಾಪ್‌ಅನ್ನು ಕಿಡಿಗೇಡಿಗಳು ಕಿತ್ತು ಹಾಕುತ್ತಾರೆ. ಇಲ್ಲವೆ ಕಬ್ಬಿಣದ ಗುಜರಿಗೆ ಹಾಕಲು ಕದ್ದೊಯ್ಯುತ್ತಾರೆ. ಈ ಹಿನ್ನೆಲೆಯಲ್ಲಿ ಎಷ್ಟೆ ನಿಗಾ ವಹಿಸಿದರೂ ಕೂಡ ನಿರುಪಯುಕ್ತ ಕೊಳವೆ ಬಾವಿಗಳು ಅಪಾಯದ ಕೂಪಗಳಾಗುತ್ತವೆ. ಹಾಗಾಗಿ, ನೆಲಮಟ್ಟಕ್ಕೆ ಸಿಮೆಂಟ್ ಗಟ್ಟಿ ಅಥವಾ ಕಲ್ಲು ಹಾಸು ಹಾಕಿ ಶಾಶ್ವತವಾಗಿ ಮುಚ್ಚುವ ಪ್ರಯತ್ನ ಪಪಂ ಆಡಳಿತದ್ದು ಎಂದು ಪಪಂ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ ತಿಳಿಸಿದರು.
ಪಟ್ಟಣದಲ್ಲಿ ಯಾರೇ ಖಾಸಗಿ ಕೊಳವೆಬಾವಿ ಹೊಡೆಸಿದ ಬಳಿಕ ನಿರುಪಯುಕ್ತವಾದಲ್ಲಿ ಮುಚ್ಚಿಸಬೇಕು. ಕೂಡಲೆ ಸಮರ್ಪಕ ಕಲ್ಲು ಅಥವಾ ಕಾಂಕ್ರೀಟ್ ಹಾಸು ಹಾಕಿ ಮುಚ್ಚಬೇಕು, ಪಪಂ ಕೊಳವೆ ಬಾವಿ ಅಪಾಯ ಸೂಚಿಸುತ್ತಿದ್ದರೆ, ಕೂಡಲೆ ಆಡಳಿತದ ಗಮನಕ್ಕೆ ತರುವ ಮೂಲಕ ಜೀವದ ರಕ್ಷಣೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಪಪಂ ಸದಸ್ಯರು ಕೋರಿದ್ದಾರೆ.
ನಿರುಪಯುಕ್ತ ಕೊಳವೆ ಬಾವಿ ಮುಚ್ಚಿಸುವ ಕಾರ್ಯದಲ್ಲಿ ಮುಖ್ಯಾಧಿಕಾರಿ ಸುರೇಶ್ ಎಂ.ಕೆ., ಕಿರಿಯ ಅಭಿಯಂತರ ಶಲ್ಜಾ, ಅಧ್ಯಕ್ಷ ಪ್ರಶಾಂತ ಮೇಸ್ತ್ರಿ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಮಹೇಶ್ ಗೌಳಿ, ಎಂ.ಡಿ.ಉಮೇಶ್ ಇದ್ದರು.